ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯವು ತ್ಯಾಜ್ಯ ನೀರಿನ ಸಮರ್ಪಕ ಬಳಕೆಯ ಕುರಿತು ಸಂಶೋಧನೆ ನಡೆಸಲು ಮುಂದಾಗಿದ್ದು, ಅಮೆರಿಕಾದ ವೇಸ್ಟ್ ವಾಟರ್ ಮ್ಯಾನೇಜ್ಮೆಂಟ್ ಇಲಿನಾಯ್ಸ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ವಿವಿಯ ಕುಲಪತಿ ಡಾ.ಜಯಕರ ಎಸ್.ಎಂ. ತಿಳಿಸಿದ್ದಾರೆ.
ಶುಕ್ರವಾರ ಪ್ರಕಟನೆ ಹೊರಡಿಸಿರುವ ಅವರು, ಈ ಸಂಶೋಧನೆಗೆ ಬೆಂಗಳೂರು ವಿಶ್ವವಿದ್ಯಾನಿಲಯ ಮುಂದಾಳತ್ವ ವಹಿಸಿದ್ದು ಬಿಬಿಎಂಪಿ, ಬಿಡಬ್ಲುಎಸ್ಎಸ್ಬಿ, ರೋಟೆರಿ ಸಂಸ್ಥೆಗಳ ಸಹಯೋಗದೊಂದಿಗೆ ತ್ಯಾಜ್ಯ ನೀರಿನ ನಿರ್ವಹಣೆಗೆ ಸುದೀರ್ಘ ಸಂಶೋಧನೆ ನಡೆಸಿ ಯೋಜನೆ ರೂಪಿಸಲಿದೆ ಎಂದಿದ್ದಾರೆ.
ತ್ಯಾಜ್ಯ ನೀರಿನ ಘಟಕ ನಿರ್ವಹಣೆ, ಶುದ್ದೀಕರಣ ಪ್ರಕ್ರಿಯೆ, ಮರುಬಳಕೆ ಪ್ರಕ್ರಿಯೆ, ತಂತ್ರಜ್ಞಾನ ಬಳಕೆ, ಸ್ಮಾರ್ಟ್ ಸಿಸ್ಟಮ್ ಅನುಷ್ಠಾನ, ಸಾರ್ವಜನಿಕ ಜಾಗೃತಿ, ಪರಿಹಾರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಒಂದು ವರ್ಷ ವಿವಿಧ ಹಂತಗಳಲ್ಲಿ ಸಂಶೋಧನೆ ನಡೆಸಲು ಬೆಂಗಳೂರು ವಿಶ್ವವಿದ್ಯಾನಿಲಯ ಮುಂದಾಗಿದೆ. ಮುಂದಿನ ವರ್ಷ ತ್ಯಾಜ್ಯ ನೀರಿನ ನಿರ್ವಹಣೆ ಕುರಿತು ಅಂತರ್ ರಾಷ್ಟ್ರೀಯ ಸಮ್ಮೇಳನ ನಡೆಸಲಿದ್ದು ಸಮ್ಮೇಳನದಲ್ಲಿ ಸಂಶೋಧನಾ ವರದಿಯನ್ನು ಮಂಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ತ್ಯಾಜ್ಯ ನೀರಿನ ನಿರ್ವಹಣಾ ತಜ್ಞರು, ಉದ್ಯಮ ಮುಖಂಡರು, ಸಂಶೋಧಕರು, ಸರಕಾರಿ ಪ್ರತಿನಿಧಿಗಳು ಮತ್ತು ಪರಿಸರ ವಕೀಲರು ಸೇರಿದಂತೆ ವಿವಿಧ ಪಾಲುದಾರರ ಈ ಸಂಶೋಧನೆಯಲ್ಲಿ ಭಾಗಿಯಾಗಲಿದ್ದಾರೆ. ಒಡಂಬಡಿಕೆ ಭಾಗವಾಗಿ ವಿಶ್ವವಿದ್ಯಾನಿಲಯದಲ್ಲಿ ಜಾಗತಿಕ ಮಟ್ಟದಲ್ಲಿ ನೀರು ಮತ್ತು ತ್ಯಾಜ್ಯನೀರಿನ ನಿರ್ವಹಣೆ, ಸವಾಲುಗಳು, ಪರಿಹಾರಗಳು ಮತ್ತು ಕಾರ್ಯತಂತ್ರದ ವಿಧಾನಗಳ ಬಗ್ಗೆ ಚರ್ಚೆ, ಸಂವಾದಗಳನ್ನು ನಡೆಸಲಾಗುವುದು ಎಂದು ಹೇಳಿದ್ದಾರೆ.
