ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನೇ ವ್ಯಕ್ತಿಯೋರ್ವ ಅದರೊಂದಿಗೆ ಸೆಣಸಿ ಅದರ ಕಾಲುಗಳನ್ನು ಕಟ್ಟಿ ದ್ವಿಚಕ್ರ ವಾಹನದಲ್ಲಿ ಹಾಕಿಕೊಂಡು ಅರಣ್ಯ ಇಲಾಖೆ ಕಚೇರಿಗೆ ತಂದ ಘಟನೆ ವರದಿಯಾಗಿದೆ. ಚಾಮರಾಜನಗರ: ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನೇ ವ್ಯಕ್ತಿಯೋರ್ವ ಅದರೊಂದಿಗೆ ಸೆಣಸಿ ಅದರ ಕಾಲುಗಳನ್ನು ಕಟ್ಟಿ ದ್ವಿಚಕ್ರ ವಾಹನದಲ್ಲಿ ಹಾಕಿಕೊಂಡು ಅರಣ್ಯ ಇಲಾಖೆ ಕಚೇರಿಗೆ ತಂದ ಘಟನೆ ವರದಿಯಾಗಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗಿವಾಳು ಗ್ರಾಮದಲ್ಲಿ ವೇಣುಗೋಪಾಲ್ ಅಲಿಯಾಸ್ ಮುತ್ತು ಎಂಬ ಯುವಕ ತಮ್ಮ ಜಮೀನಿಗೆ ಬಂದ ಚಿರತೆಯನ್ನು ಸೆರೆಹಿಡಿದಿದ್ದಾನೆ. ವೇಣುಗೋಪಾಲ್ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಆತನ ಮೇಲೆ ಚಿರತೆ ದಾಳಿ ಮಾಡಿದ್ದು, ಈ ವೇಳೆ ಚಿರತೆ ಮೇಲೆ ಪ್ರತಿದಾಳಿ ಮಾಡಿದ ವೇಣುಗೋಪಾಲ್ ಅದನ್ನು ಮಣಿಸಿ ಅದರ ಕೈಕಾಲು ಕಟ್ಟಿದ್ದಾನೆ. ಚಿರತೆಯೊಂದಿಗಿನ ಸೆಣಸಾಟದ ವೇಳೆ ವೇಣುಗೋಪಾಲ್ ಗೂ ಕೊಂಚ ಗಾಯಗಳಾಗಿದ್ದು ಆತನಿಗೂ ವೈದ್ಯರು ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಚಿರತೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ 14 ವರ್ಷದ ಬಾಲಕಿ ಸಾವು
ನಂತರ ಸೆರೆಹಿಡಿದ ಚಿರತೆಯನ್ನು ವೇಣುಗೋಪಾಲ್ ತನ್ನ ಬೈಕ್‌ನಲ್ಲಿ ಕಟ್ಟಿಕೊಂಡು ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಅದಕ್ಕೆ ಚಿಕಿತ್ಸೆ ಕೊಡಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಈ ಘಟನೆ ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ವ್ಯಕ್ತಿ ಧೈರ್ಯ ಮತ್ತು ಆತನ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತಂತಿಬೇಲಿಗೆ ಸಿಲುಕಿ ನರಳಿದ ಚಿರತೆ
ಮತ್ತೊಂದೆಡೆ ಆಹಾರ ಅರಸಿ ಬಂದಿದ್ದ ಚಿರತೆಯೊಂದು ತಂತಿ ಬೇಲಿಯಲ್ಲಿ ಸಿಲುಕಿ ಹೊರಬರಲಾಗದೆ ಒದ್ದಾಡುತ್ತಿರುವ ಘಟನೆಯೊಂದು ಚಿಕ್ಕಮಗಳೂರು ತಾಲೂಕಿನ ಕೆಸವಿನಮನೆ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ: ಮೈಸೂರು: ಮೊರಾರ್ಜಿ ದೇಸಾಯಿ, ರಾಣಿ ಚನ್ನಮ್ಮ ಶಾಲಾ ಆವರಣದಲ್ಲಿ ಚಿರತೆ ಭೀತಿ!
ಆಹಾರ ಅರಸಿಕೊಂಡು ಬಂದ ವೇಳೆ ತೋಟಕ್ಕೆ ಹಾಕಿದ ಬೇಲಿಗೆ ಚಿರತೆ ಸಿಲುಕಿಕೊಂಡು ಹೊರಬರಲಾಗದೆ ಒದ್ದಾಡುತ್ತಿದೆ. ಇದನ್ನು ಕಂಡ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಕಂಡ ಚಿರತೆ ಮತ್ತೆ ಉದ್ರೇಕಕ್ಕೆ ಒಳಗಾಗಿದೆ. ನಂತರ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಶಿವಮೊಗ್ಗದಲ್ಲಿರುವ ಅರವಳಿಕೆ ತಜ್ಞರಿಗೆ ಕರೆ ಮಾಡಿದ್ದಾರೆ. ಸದ್ಯ ಶಿವಮೊಗ್ಗ ವೈದ್ಯರು ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.