ರೋಹತಾಸ್: ದೇವಾಲಯಗಳು ಮಾನಸಿಕ ಗುಲಾಮಗಿರಿಗೆ ದಾರಿ. ಆದರೆ, ಶಾಲೆಗಳು ಜೀವನದಲ್ಲಿ ಬೆಳಕಿನ ಮಾರ್ಗವಾಗಿದೆ ಎಂದು ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ಹೇಳಿದ್ದಾರೆ.
ಸಮಾಜ ಸುಧಾರಕಿ ಸಾವಿತ್ರಿ ಬಾಯಿ ಫುಲೆ ಅವರ ಜನ್ಮ ದಿನವಾದ ರವಿವಾರ ರೊಹತಾಸ್ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರ್ಜೆಡಿ ನಾಯಕ ಚಂದ್ರಶೇಖರ್, ಅಯೋಧ್ಯೆಯ ರಾಮ ಮಂದಿರವನ್ನು ಟೀಕಿಸಿದರು. ಅದು ಜೇಬು ತುಂಬಿಸುವ ತಾಣವಾಗಿದೆ ಎಂದರು.
‘‘ರಾಮ ಮಂದಿರಕ್ಕೆ ಮಂಜೂರು ಮಾಡಿದ ನಿವೇಶನವು ಕೇವಲ ಶೋಷಣೆಯ ತಾಣವಾಗಿದೆ. ಇದು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದ ಕೆಲವು ಪಿತೂರಿಗಾರರ ಜೇಬು ತುಂಬಿಸಿಕೊಳ್ಳುವ ಸ್ಥಳವಾಗಿದೆ. ನಾವು ಹುಸಿ ಹಿಂದುತ್ವ ಹಾಗೂ ಹುಸಿ ರಾಷ್ಟ್ರೀಯತೆ ಕುರಿತು ಜಾಗೃತವಾಗಿರಬೇಕು. ಶ್ರೀರಾಮ ಪ್ರತಿಯೊಬ್ಬರ ಮನದಲ್ಲೂ ನೆಲೆಸಿದ್ದಾನೆ. ರಾಮನನ್ನು ನೋಡಲು ಎಲ್ಲಿಗೂ, ಯಾವುದೇ ದೇವಾಲಯಕ್ಕೂ ಹೋಗುವ ಅಗತ್ಯತೆ ಇಲ್ಲ’’ ಎಂದು ಅವರು ಹೇಳಿದರು.
‘‘ಒಂದು ವೇಳೆ ನೀವು ಗಾಯಗೊಂಡರೆ ಎಲ್ಲಿಗೆ ಹೋಗುತ್ತೀರಿ? ದೇವಾಲಯಕ್ಕೆ ಅಥವಾ ಆಸ್ಪತ್ರೆಗೆ ? ಒಂದು ವೇಳೆ ನೀವು ಶಿಕ್ಷಣ ಪಡೆಯಲು, ಅಧಿಕಾರಿ, ಶಾಸಕ ಅಥವಾ ಸಂಸದನಾಗಲು ಬಯಸಿದರೆ, ದೇವಾಲಯಕ್ಕೆ ಹೋಗುತ್ತೀರಾ ? ಅಥವಾ ಶಾಲೆಗೆ ಹೋಗುತ್ತೀರಾ? ಎಂದು ಸಾವಿತ್ರಿ ಬಾಯಿ ಪುಲೆ ಪ್ರಶ್ನಿಸಿದ್ದರು. ಇದನ್ನೇ ಫತೇಹ್ ಬಹಾದೂರ್ ಸಿಂಗ್ ಹೇಳಿದ್ದಾರೆ’’ ಎಂದು ಅವರು ತಿಳಿಸಿದರು.
ಸಿಂಗ್ ಹೇಳಿಕೆಯನ್ನು ವಿರೋಧಿಸುತ್ತಿರುವ ಪಿತೂರಿಗಾರರು ಅವರ ನಾಲಿಗೆ ಕತ್ತರಿಸಲು 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ ಎಂದು ಅವರು ಹೇಳಿದರು. ಮಹಾಭಾರತವನ್ನು ಉಲ್ಲೇಖಿಸಿದ ಅವರು ಈಗ ಏಕಲವ್ಯನ ಮಕ್ಕಳು ಹೆಬ್ಬೆರಳು ನೀಡಲಾರರು ಎಂದರು.
ಚಂದ್ರಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿಯ ಹಿರಿಯ ನಾಯಕ ನಿಖಿಲ್ ಆನಂದ್, ಆರ್ ಜೆ ಡಿ ನಾಯಕರ ಇಂತಹ ಹೇಳಿಕೆ ಅವರ ಅಲ್ಪಸಂಖ್ಯಾತ ಮತದಾರರನ್ನು ತೃಪ್ತಿಪಡಿಸುವ ಪ್ರಯತ್ನ ಎಂದಿದ್ದಾರೆ.