ಬೀದರ್: ದೇಶದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಕೊರತೆಯನ್ನು ಬಿಜೆಪಿ ರೂಪಿಸಿರುವ ಬಿಕ್ಕಟ್ಟು ಆಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಶನಿವಾರ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ತಮ್ಮ ಉದ್ಯಮಿ ಸ್ನೇಹಿತರನ್ನು ಸಮಾಧಾನಪಡಿಸಲು ದೇಶದ ವಿದೇಶಾಂಗ ನೀತಿಯಲ್ಲಿ ರಾಜಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಬಿಜೆಪಿ ಈ ಬಿಕ್ಕಟ್ಟನ್ನು ರೂಪಿಸಿದೆ. ಇದು ಕೇಂದ್ರ ಸರ್ಕಾರದ ವಿನಾಶಕಾರಿ ನೀತಿ ಹೊರತು ಬೇರೇನೂ ಅಲ್ಲ. ಯುದ್ಧಕ್ಕೆ ಎರಡು ದಿನ ಮುನ್ನಾ ಇಸ್ರೇಲ್ಗೆ ಮೋದಿ ಭೇಟಿ ನೀಡುವ ಅಗತ್ಯವೇನಿತ್ತು? ಅವರು ಸಾಧಿಸಿದ್ದೇನು? ಇಸ್ರೇಲ್ನಿಂದ ಪ್ರಶಸ್ತಿ ಪಡೆದರು. ಇರಾನ್ ನಾಯಕರ ಮೇಲಿನ ದಾಳಿಯನ್ನು ಖಂಡಿಸಲಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
ಜೈಶಂಕರ್, ಹರ್ದೀಪ್ ಸಿಂಗ್ ಪುರಿ, ಪ್ರಧಾನಿ ಮೋದಿ ಎಲ್ಲಿ? ಕಳೆದ 14 ದಿನಗಳಿಂದ ಈ ಯುದ್ಧ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಎಷ್ಟು ಬಾರಿ ಇದರ ಬಗ್ಗೆ ಮಾತನಾಡಿದ್ದಾರೆ. ಬಿಕ್ಕಟ್ಟು ಇಲ್ಲದಿದ್ದರೆ ಅಗತ್ಯ ಸೇವಾ ನಿರ್ವಹಣಾ ಕಾಯ್ದೆಯನ್ನು ಯಾಕೆ ರದ್ದುಪಡಿಸಲಾಗಿದೆ? ಪ್ರಧಾನಿ ಮೋದಿ ದೇಶದ ಹಿತಕ್ಕಿಂತ ಎರಡ್ಮೂರು ಉದ್ಯಮಿ ಗೆಳೆಯರಿಗಾಗಿ ವಿದೇಶಾಂಗ ನೀತಿಯೊಂದಿಗೆ ರಾಜಿ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಮಧ್ಯೆ ಎಲ್ಪಿಜಿ ಪೂರೈಕೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ಘೋಷಣೆ ಮತ್ತು ಪ್ರತಿಭಟನೆಯ ಕುರಿತು ವಾಗ್ದಾಳಿ ನಡೆಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದ ಹಿತಾಸಕ್ತಿಗಾಗಿ ಸರ್ಕಾರದೊಂದಿಗೆ ಒಟ್ಟಾಗಿ ನಿಲ್ಲುವ ಬದಲು ಬೇಜವಾಬ್ದಾರಿಯುತ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
