ಮಂಗಳೂರು: ವಿಶ್ವ ಹಿಂದೂ ಪರಿಷತ್ (ವಿಹಿಂಪ) ಸ್ಥಾಪನೆಯಾಗಿ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ 1 ಲಕ್ಷ ವಿಹಿಂಪ ಘಟಕ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ವಿಹಿಂಪ ಕೇಂದ್ರೀಯ ಸಹ ಪ್ರಧಾನ ಕಾರ್ಯದರ್ಶಿ ಸ್ಥಾನು ಮಲಯನ್ ಹೇಳಿದ್ದಾರೆ.
ನಗರದಲ್ಲಿ ವಿಹಿಂಪ ಕರ್ನಾಟಕ ಪ್ರಾಂತ ಬೈಠಕ್‌ನ್ನು ಮುಕ್ತಾಯಗೊಳಿಸಿದ ಬಳಿಕ ರವಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
1964ರಲ್ಲಿ ಸ್ಥಾಪನೆಯಾದ ವಿಹಿಂಪಗೆ ಈಗ 60 ವರ್ಷ ತುಂಬುತ್ತಿದೆ. ಪ್ರಸಕ್ತ ದೇಶದ 60 ಸಾವಿರ ಹಳ್ಳಿಗಳಲ್ಲಿ ಘಟಕಗಳನ್ನು ಹೊಂದಿದೆ, ಇದನ್ನು ಒಂದು ಲಕ್ಷಕ್ಕೆ ತಲುಪಿಸುವ ಗುರಿ ಹೊಂದಲಾಗಿದೆ. ಜಗತ್ತಿನ 32 ರಾಷ್ಟ್ರಗಳಲ್ಲಿ ವಿಹಿಂಪ ಘಟಕಗಳು ಇವೆ. ವಿಹಿಂಪದ ಸಹವರ್ತಿ ಸಂಘಟನೆಗಳಾದ ಬಜರಂಗದಳ, ದುರ್ಗಾ ವಾಹಿನಿ, ಮಾತೃ ಶಕ್ತಿ ಸೇರಿದಂತೆ 18 ವಿವಿಧ ಶಾಖೆಗಳಿವೆ. ಇವು ದೇಶಾದ್ಯಂತ ಕಾರ್ಯನಿರ್ವಹಿಸುತ್ತಿವೆ ಎಂದರು.
ಬೈಠಕ್‌ನಲ್ಲಿ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಲಾಗಿದೆ. ದೇವಸ್ಥಾನಗಳ ಆಡಳಿತದಲ್ಲಿ ಸರಕಾರ ಹಸ್ತಕ್ಷೇಪ ಮಾಡಬಾರದು ಮತ್ತು ಸಂವಿಧಾನದಲ್ಲಿ ಅವಕಾಶ ಇಲ್ಲದಿದ್ದರೂ ಅಲ್ಪಸಂಖ್ಯಾತರಿಗೆ 10 ಸಾವಿರ ಕೋ.ರೂ. ನೀಡುವುದಾಗಿ ವಾಗ್ದಾನ ಮಾಡಿರುವುದನ್ನು ಕೈ ಬಿಡಬೇಕು ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಉಪಸ್ಥಿತರಿದ್ದರು.