ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೇಟ್ಟಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಯಾವುದೇ ಶಾಸಗಿ ಶಾಲೆಗಿಂತಲೂ ಕಡಿಮೆಯಿಲ್ಲವೆಂಬಂತೆ ಸರ್ಕಾರಿ ಶಾಲೆಯನ್ನು ಮೇಲ್ದರ್ಜೆಗೇರಿಸಲಾಗಿದೆ. ಈ ಶಾಲೆಯಲ್ಲಿ ಮೊದಲು ಮಕ್ಕಳ ಸಂಖ್ಯೆ ಬೆರಳೆಣಿಕೆಯಷ್ಟೇ ಇತ್ತು, ಆದರೆ ಈಗ ನೂರಾರು ಮಕ್ಕಳು ಓದುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಶಾಲಾ ಆಡಳಿತ ಮಂಡಳಿ ಪೋಷಕರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಲು ಹೊರಟಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.
ಈ ಸರ್ಕಾರಿ ಶಾಲೆಯನ್ನು ಖಾಸಗಿ ಕಂಪನಿಗಳ ಸಹಕಾರದೊಂದಿಗೆ ಸಿಎಸ್ಆರ್ ನಿಧಿಯಲ್ಲಿ ಮೇಲ್ದರ್ಜೆಗೇರಿಸಲಾಗಿದೆ. ಬರೂಬ್ಬರಿ 2 ಕೋಟಿ ಖರ್ಚು ಮಾಡಿ ಶಾಲೆಯನ್ನು ಉನ್ನತೀಕರಣ ಮಾಡಲಾಗಿದೆ. ಈ ಶಾಲೆಯಲ್ಲಿ ಮೊದಲಿಗೆ 50 ಜನ ಸಹ ಮಕ್ಕಳಿರಲಿಲ್ಲ. ಆದರೆ ಇದೀಗ 800 ಜನ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ. ಈ ಮಕ್ಕಳಿಗೆ ಐಡಿ ಕಾರ್ಡ್, ಟೈ ಮತ್ತು ಬೆಲ್ಟ್ ಕೊಡಿಸಬೇಕೆಂದು ಶಿಕ್ಷಕರು ಪ್ರತಿಯೊಬ್ಬ ಪೋಷಕರ ಬಳಿ 1000 ಹಣವನ್ನು ಪಡೆದುಕೊಂಡಿದ್ದಾರೆ. ಇನ್ನೂ ಈ ರೀತಿ ಪಡೆದ ಹಣ 6 ಲಕ್ಷಕ್ಕೂ ಅಧೀಕವಾಗಿದೆ. ಆದರೆ ಹಣ ಪಡೆಯುವುದಕ್ಕೆ ಶಿಕ್ಷಕರು ಸರ್ಕಾರದಿಂದ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ ಬಡ ಕೂಲಿ ಕಾರ್ಮಿಕರು ಹೋಗುವ ಸರ್ಕಾರಿ ಶಾಲೆಯಲ್ಲಿ ಈ ರೀತಿ 1000 ಹಣ ಪಡೆಯುವುದು ಎಷ್ಟು ಸರಿ ಇದಕ್ಕೆ ಅನುಮತಿಕೊಟ್ಟವರು ಯಾರು ಅಂತ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ.
ಬಾಶೇಟ್ಟಹಳ್ಳಿ ಕೈಗಾರಿಕಾ ಪ್ರದೇಶ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನ ಬಡ ಮಕ್ಕಳು ಈ ಶಾಲೆಗೆ ಬರುತ್ತಾರೆ. ಸರ್ಕಾರದ ಆಂಗ್ಲ ಮಾದ್ಯಮ ಶಾಲೆ ಅಂತ ಮಕ್ಕಳ ಸಂಖ್ಯೆಯು ಹೆಚ್ಚಾಗಿದೆ. ಹೀಗಾಗಿ ಕೆಲವರು 1000 ಅಷ್ಟೆ ಅಲ್ವಾ ಅಂತ ಕೊಟ್ಟರೇ, ಇನ್ನೂ ಕೆಲವರು ಹಣವಿಲ್ಲದೆ ಸುಮ್ಮನಾಗಿದ್ದಾರೆ. ಜತೆಗೆ ಹೈಟೆಕ್ ಆಗಿ ನಿರ್ಮಾಣವಾಗಿರುವ ಈ ಸರ್ಕಾರಿ ಶಾಲೆಯ ಸ್ವಚ್ಚತೆ ಸೇರಿದಂತೆ ಹೆಚ್ಚುವರಿಯಾಗಿ ತೆಗೆದುಕೊಂಡಿರುವ ಶಿಕ್ಷಕರಿಗೆ ಸಂಬಳ ಸರ್ಕಾರ ಕೊಡುತ್ತಿಲ್ಲವಂತೆ.
-ಮುನಿಯಪ್ಪ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ
ಬಹು ಮಹಡಿ ಕಟ್ಟಡದ ಶಾಲೆ ಶೌಚಾಲಯ ಸೇರಿದಂತೆ ಹಲವು ಮೂಲ ಸೌಕರ್ಯಗಳಿಗೆ ಹಣದ ಕೊರೆತೆಯಿಂದ ಪೋಷಕರ ಒತ್ತಾಯದಂತೆ ನಾವು ಹಣ ಪಡೆದಿದ್ದೇವೆ ಹೊರೆತು ನಾವು ಯಾವುದೆ ಒತ್ತಡ ಹಾಕಿ ಪೋಷಕರಿಂದ ಹಣ ತೆಗೆದುಕೊಂಡಿಲ್ಲ ಅಂತ ಶಿಕ್ಷಕರು ಮತ್ತು ಶಾಲೆಯೆ ಎಸ್ಡಿಎಂಸಿ ಅಧ್ಯಕ್ಷ ಹೇಳುತ್ತಿದ್ದಾರೆ. ಜೊತೆಗೆ ಈಗಾಗಲೆ ಪೋಷಕರಿಂದ ಪಡೆದಿರುವ 6 ಲಕ್ಷಕ್ಕೂ ಅಧಿಕ ಹಣವನ್ನು ಬ್ಯಾಂಕ್ನಲ್ಲಿಟ್ಟಿದ್ದು ನಾವು ಖರ್ಚು ಮಾಡಿಲ್ಲ, ಎಲ್ಲವನ್ನೂ ಪೊಷಕರು ಆಡಳಿತ ಮಂಡಳಿ ಗಮನಕ್ಕೆ ತಂದು ಮಕ್ಕಳು ಮತ್ತು ಶಾಲೆಗಾಗಿ ಉಪಯೋಗಿಸುವುದಾಗಿ ಹೇಳಿದ್ದಾರೆ.
– ರಂಗಪ್ಪ ಕ್ಷೇತ್ರ ಶಿಕ್ಷಣಾಧೀಕಾರಿ ದೊಡ್ಡಬಳ್ಳಾಪುರ
ಸರ್ಕಾರಿ ಶಾಲೆಯನ್ನು ದಾನಿಗಳು, ದತ್ತು ಪಡೆದುಕೊಂಡು ಹೈಟೆಕ್ ಶಾಲೆಯಾಗಿ ಮಾಡಿಕೊಟ್ಟಿದ್ದಾರೆ. ಶಿಕ್ಷಕರು ಮತ್ತು ಕೆಲವರು ಸೇರಿಕೊಂಡು ಹಣ ಮಾಡುತ್ತಿದ್ದಾರೆ ಅಂತ ಸ್ಥಳಿಯರು ಆರೋಪಿಸಿದ್ದಾರೆ. ಇನ್ನೂ ಈ ಬಗ್ಗೆ ದೊಡ್ಡಬಳ್ಳಾಪುರದ ಕ್ಷೇತ್ರ ಶಿಕ್ಷಣಾಧಿಕಾರಿಯನ್ನ ಕೇಳಿದರೇ ನಾವು ಶಾಲೆಯ ಮಕ್ಕಳ ಪೋಷಕರಿಂದ ಹಣ ವಸೂಲಿ ಮಾಡಲು ಯಾವುದೇ ಆದೇಶ ನೀಡಿಲ್ಲ. ಶಾಲೆಯಿಂದ ಹಣ ವಸೂಲಿ ಮಾಡಿರುವ ಬಗ್ಗೆ ನೋಟಿಸ್ ಜಾರಿ ಮಾಡಿದ್ದು ಈ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇನೆ ಅಂತಿದ್ದಾರೆ.
ಒಟ್ಟಾರೆ ಸರ್ಕಾರಿ ಶಾಲೆ ಹೈಟೆಕ್ ಆಗಿದೆ ಅಂತ ನೂರಾರು ಜನ ವಿದ್ಯಾರ್ಥಿಗಳು ಶಾಲೆಗ ಬಂದು ಸೇರಿದರೇ ಅಧಿಕಾರಿಗಳ ಅನುಮತಿಯಿಲ್ಲದೆ ಸಿಬ್ಬಂದಿಯೇ ಲಕ್ಷ ಲಕ್ಷ ಹಣವನ್ನು ವಸೂಲಿ ಮಾಡಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಇನ್ನೂ ಈ ಬಗ್ಗೆ ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದ್ದು ತನಿಖೆಯ ನಂತರವಷ್ಟೇ ಹಣ ವಸೂಲಿಯ ಅಸಲಿ ಕಥೆ ಬೆಳಕಿಗೆ ಬರಬೇಕಿದೆ.
ನವೀನ್ ಟಿವಿ9 ದೇವನಹಳ್ಳಿ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ