ಹೊಸದಿಲ್ಲಿ: ಹತಾಶೆಯ ಅಪರೂಪದ ಪ್ರದರ್ಶನದಲ್ಲಿ ಭಾರತದ ಮುಖ್ಯ ನ್ಯಾಯಾಧೀಶ ಡಿ.ವೈ.ಚಂದ್ರಚೂಡ್ ಅವರು ಬುಧವಾರ ಅರ್ಜಿಯೊಂದನ್ನು ವಿಚಾರಣೆಗೆ ಪಟ್ಟಿ ಮಾಡುವ ಕುರಿತು ಕಾವೇರಿದ ವಾಗ್ವಾದದ ಸಂದರ್ಭದಲ್ಲಿ ವಕೀಲರೋರ್ವರಿಗೆ ತೀಕ್ಷ್ಣ ಎಚ್ಚರಿಕೆಯನ್ನು ನೀಡಿದರು. ಏರಿದ ಧ್ವನಿಯಲ್ಲಿ ಮಾತನಾಡಿದ್ದಕ್ಕಾಗಿ ವಕೀಲರಿಗೆ ಛೀಮಾರಿ ಹಾಕಿದ ನ್ಯಾ.ಚಂದ್ರಚೂಡ್,ನ್ಯಾಯಾಲಯವನ್ನು ದಬಾಯಿಸುವ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು.
ವಾಗ್ವಾದದ ಸಮಯದಲ್ಲಿ ಅಸಮಾಧಾನಗೊಂಡಿದ್ದ ನ್ಯಾ.ಚಂದ್ರಚೂಡ್ ವಕೀಲರ ವಾಗ್ಝರಿಗೆ ಅಡ್ಡಿಪಡಿಸಿ ಹೆಚ್ಚು ಗೌರವಾನ್ವಿತ ಮತ್ತು ಸೂಕ್ತವಾಗಿ ವರ್ತಿಸುವಂತೆ ಆಗ್ರಹಿಸಿದರು. ‘ಒಂದು ಸೆಕೆಂಡ್,ನಿಮ್ಮ ಧ್ವನಿಯನ್ನು ತಗ್ಗಿಸಿ. ನೀವು ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ನ್ಯಾಯಾಲಯದ ಮುಂದೆ ವಾದಿಸುತ್ತಿದ್ದೀರಿ;ನಿಮ್ಮ ಧ್ವನಿಯನ್ನು ತಗ್ಗಿಸಿ, ಇಲ್ಲದಿದ್ದರೆ ನಾನು ನಿಮ್ಮನ್ನು ನ್ಯಾಯಾಲಯದಿಂದ ಹೊರಗೆ ಹಾಕಬೇಕಾಗುತ್ತದೆ’ ಎಂದು ಅವರು ಘೋಷಿಸಿದರು.
ವಕೀಲರ ಸಾಮಾನ್ಯ ಪರಿಪಾಠಗಳನ್ನು ಪ್ರಶ್ನಿಸಿದ ನ್ಯಾ.ಚಂದ್ರಚೂಡ್, ನೀವು ಸಾಮಾನ್ಯವಾಗಿ ಎಲ್ಲಿ ವಾದಿಸುತ್ತೀರಿ? ಪ್ರತಿ ಸಲವೂ ನೀವು ನ್ಯಾಯಾಧೀಶರತ್ತ ಹೀಗೆಯೇ ಕೂಗುತ್ತೀರಾ ಎಂದು ಕೇಳಿದರು.
ನ್ಯಾಯಾಲಯದ ಘನತೆಯನ್ನು ಕಾಯ್ದುಕೊಳ್ಳುವ ಮಹತ್ವಕ್ಕೆ ಒತ್ತು ನೀಡಿದ ಅವರು, ‘ದಯವಿಟ್ಟು ನಿಮ್ಮ ಸ್ವರವನ್ನು ತಗ್ಗಿಸಿ. ನಿಮ್ಮ ಧ್ವನಿಯನ್ನು ಎತ್ತರಿಸುವ ಮೂಲಕ ನ್ಯಾಯಾಲಯವನ್ನು ದಬಾಯಿಸಬಹುದು ಎಂದು ನೀವು ಭಾವಿಸಿದ್ದರೆ ನೀವು ತಪ್ಪಾಗಿ ತಿಳಿದುಕೊಂಡಿದ್ದೀರಿ. ಅದು ೨೩ ವರ್ಷಗಳಲ್ಲಿ ಎಂದೂ ಸಂಭವಿಸಿಲ್ಲ,ನನ್ನ ವೃತ್ತಿಜೀವನದ ಕೊನೆಯ ವರ್ಷದಲ್ಲಿಯೂ ಸಂಭವಿಸುವುದಿಲ್ಲ’ ಎಂದು ಹೇಳಿದರು.
ಮುಖ್ಯ ನ್ಯಾಯಾಧೀಶರ ಕಠಿಣ ಎಚ್ಚರಿಕೆಯಿಂದ ದಿಗ್ಭ್ರಮೆಗೊಂಡ ವಕೀಲರು, ತಕ್ಷಣವೇ ಕ್ಷಮೆ ಯಾಚಿಸಿದರು ಮತ್ತು ಹೆಚ್ಚು ಸೌಜನ್ಯಯುತವಾಗಿ ತನ್ನ ನಿವೇದನೆಯನ್ನು ಮುಂದುವರಿಸಿದರು.
ನ್ಯಾಯಾಲಯದ ಘನತೆಯನ್ನು ಕಾಯ್ದುಕೊಳ್ಳುವಂತೆ ನ್ಯಾ.ಚಂದ್ರಚೂಡ್ ಎಚ್ಚರಿಕೆ ನೀಡಿದ್ದು ಇದೇ ಮೊದಲಲ್ಲ. ಪ್ರತ್ಯೇಕ ಸಂದರ್ಭವೊಂದರಲ್ಲಿ ವಕೀಲರೋರ್ವರು ನ್ಯಾಯಾಲಯದೊಳಗೆ ಮೊಬೈಲ್ ಫೋನ್ನಲ್ಲಿ ಮಾತನಾಡುತ್ತಿದ್ದನ್ನು ತೀವ್ರವಾಗಿ ಆಕ್ಷೇಪಿಸಿದ್ದ ನ್ಯಾ.ಚಂದ್ರಚೂಡ್, ‘ನೀವು ಫೋನ್ನಲ್ಲಿ ಮಾತನಾಡಲು ಇದೇನು ಮಾರುಕಟ್ಟೆಯೇ? ಅವರ ಫೋನ್ನ್ನು ವಶಪಡಿಸಿಕೊಳ್ಳಿ ’ ಎಂದು ಗುಡುಗಿದ್ದರು.