ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಬ್ಬರದ ಭಾಷಣ ಮಾಡಿದರು. ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಬ್ಬರದ ಭಾಷಣ ಮಾಡಿದರು.
ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದರು. ಇದೇ ವೇಳೆ 8 ಮಂದಿ ಸಚಿವರೂ ಕೂಡ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿಯವರು, ಕರ್ನಾಟಕದ ಜನರಿಗೆ ನನ್ನ ಮನಃಪೂರ್ವಕವಾಗಿ ಅಭಿನಂದನೆಗಳು. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿದ್ದಕ್ಕೆ ಅಭಿನಂದನೆಗಳು ಎಂದು ಹೇಳಿದರು.
ಭಾರತ್ ಜೋಡೋ ಯಾತ್ರೆಯಿಂದ ದ್ವೇಷ ಸೋತಿದೆ, ಪ್ರೀತಿ ಗೆದ್ದಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯ ಸಾಧಿಸಿದ ಬಳಿಕ, ಗೆಲುವಿಗೆ ನಾನಾ ರೀತಿಯ ಕಾರಣಗಳನ್ನು ಹೇಳಲಾಯಿತು. ಹಲವು ವಿಶ್ಲೇಷಣೆಗಳನ್ನು ಮಾಡಲಾಯಿತು. ಈ ಗೆಲುವಿಗೆ ನಿಜವಾದ ಕಾರಣ, ಬಡವರು, ದಲಿತರು, ಆದಿವಾಸಿಗಳು ಮತ್ತು ಹಿಂದುಳಿದವರ ಜೊತೆಗೆ ನಿಂತಿದ್ದಾಗಿದೆ. ಇದರಿಂದಾಗಿಯೇ ಕಾಂಗ್ರೆಸ್ ವಿಜಯ ಸಾಧಿಸಿದೆ. ನಾವು ಸತ್ಯವನ್ನು ನಂಬಿದ್ದೇವೆ. ಬಿಜೆಪಿ ಬಳಿ ಹಣ, ಪೊಲೀಸ್ ಹಾಗೂ ಎಲ್ಲಾ ರೀತಿಯ ಬಲವೂ ಇತ್ತು. ಆದರೆ, ಆ ಶಕ್ತಿಯನ್ನು ಕರ್ನಾಟಕದ ಜನತೆ ಸೋಲಿಸಿದ್ದಾರೆಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದ ಸಿಎಂ ಆಗಿ ಸಿದ್ದರಾಮಯ್ಯ, ಡಿಸಿಎಂ ಆಗಿ ಡಿಕೆ ಶಿವಕುಮಾರ್, 8 ಸಚಿವರಿಂದ ಪ್ರಮಾಣ ವಚನ ಸ್ವೀಕಾರ
ಚುನಾವಣೆ ವೇಳೆ ನಾವು ನಿಮಗೆ 5 ಭರವಸೆಗಳನ್ನು ನೀಡಿದ್ದೆವು. ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಯುವನಿಧಿ ಗ್ಯಾರಂಟಿಗಳನ್ನು ನಾವು ನೀಡಿದ್ದೆವು. ಅವುಗಳನ್ನು ಈಡೇರಿಸುತ್ತೇವೆ. ಸುಳ್ಳು ಭರವಸೆಗಳನ್ನು ನಾವು ನೀಡಿಲ್ಲ. ನುಡಿದಂತೆ ನಡೆಯುತ್ತೇವೆ. 1-2 ಗಂಟೆಗಳಲ್ಲಿ ರಾಜ್ಯ ಮೊದಲ ಸಂಪುಟ ಸಭೆ ನಡೆಯಲಿದೆ. ಆ ಸಭೆಯಲ್ಲಿ 5 ಗ್ಯಾರಂಟಿಗಳನ್ನು ಜಾರಿಗೆ ತರಲಾಗುತ್ತದೆ. ರಾಜ್ಯ ಜನತೆಗೆ ಸ್ವಚ್ಛ, ಭ್ರಷ್ಟಾಚಾರ ರಹಿತ ಸರ್ಕಾರವನ್ನು ನೀಡುತ್ತೇವೆ. ಜನರು ಪ್ರೀತಿ, ಶಕ್ತಿ ಕಾಂಗ್ರೆಸ್ಗೆ ನೀಡಿದ್ದನ್ನು ಮರೆಯಲು ಸಾಧ್ಯವಿಲ್ಲ ಎಂದರು.
ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು, ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಹಿಂದಿನ ಸರ್ಕಾರದಲ್ಲೂ ನಾವು ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನುಡಿದಂತೆ ನಾವು ನಡೆಯುತ್ತೇವೆ. ಈ ಹಿಂದೆ ಮೋದಿ ಜಪಾನ್ಗೆ ಹೋಗಿದ್ದಾಗ ನೋಟ್ ಬ್ಯಾನ್ ಆಗಿತ್ತು. ಈಗಲೂ ಮೋದಿ ಜಪಾನ್ ಪ್ರವಾಸ ವೇಳೆ 2000 ರುಪಾಯಿ ನೋಟು ಆಗಿದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಸರ್ಕಾರ ಎಂದರು.