ಮಂಗಳೂರು: ಹಿಂದುತ್ವಕ್ಕೆ ಬದ್ಧತೆ ಇಟ್ಟುಕೊಂಡು, ಅಭಿವೃದ್ಧಿಯನ್ನು ಆದ್ಯತೆಯಾಗಿಸಿಕೊಂಡು ಕಾರ್ಯಕರ್ತರ ಸಹಕಾರ ಪಡೆದು, ಹಿರಿಯರ ಮಾರ್ಗದರ್ಶನ, ನರೇಂದ್ರ ಮೋದಿಯವರ ಪ್ರೇರಣೆ ಹಾಗೂ ಮಾರ್ಗದರ್ಶನದೊಂದಿಗೆ ಜಿಲ್ಲೆಯನ್ನು ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯಲು ಪೂರ್ಣ ಶ್ರಮ ವಹಿಸುವುದಾಗಿ ದ.ಕ. ಜಿಲ್ಲೆಯ ಲೋಕಸಭೆಯ ವಿಜೇತ ಅಭ್ಯರ್ಥಿ ಬ್ರಿಜೇಶ್ ಚೌಟ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಗೆಲುವಿನ ಹಾದಿಯಲ್ಲಿರುವ (ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ) ಬ್ರಿಜೇಶ್ ಚೌಟರು ಸುರತ್ಕಲ್‌ನ ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಕಾರ್ಯಕರ್ತರು ಸಂಭ್ರಮಾಚರಣೆಯ ಮೂಲಕ ಅವರನ್ನು ಸ್ವಾಗತಿಸಿದರು. ಈ ಸಂದರ್ಭ ಮಾಧ್ಯಮಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.
ತನ್ನ ಗೆಲುವು ದ.ಕ. ಜಿಲ್ಲೆಯ ಬಿಜೆಪಿ ಕಾರ್ಯಕರ್ತರ ಗೆಲುವು, ಸಂಘಟನೆ, ಹಿಂದುತ್ವದ ಗೆಲುವಾಗಿದೆ ಎಂದು ಹೇಳಿರುವ ಅವರು, ಸತ್ಯ ಧರ್ಮ, ನ್ಯಾಯದ ಆಧಾರದಲ್ಲಿ ಈ ಚುನಾವಣೆಯನ್ನು ಎದುರಿಸಿದ್ದೆವು. ತುಳುನಾಡಿನ ಮಣ್ಣು ಸತ್ಯ ಧರ್ಮ ನ್ಯಾಯಕ್ಕೆ ಯಾವತ್ತೂ ಗಟ್ಟಿಯಾಗಿ ನಿಂತಿದೆ. ಸತ್ಯ ಧರ್ಮದ ನ್ಯಾಯದ ಜಯ ಆಗಿದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.