ಧಾರವಾಡ: ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಭಾರೀ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಡೆದ ಭಾರೀ ಪ್ರತಿಭಟನೆ ನಂತರ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಕಾರ್ಯಕರ್ತರು ಪೊಲೀಸರೊಂದಿಗೆ ಘರ್ಷಣೆ ನಡೆಸಿ, ಅವರಿಗೆ ಪ್ರತಿಭಟನೆಗೆ ಅನುಮತಿ ನೀಡಿದ್ದ ಸ್ಥಳದಿಂದ ಬೇರೆ ಕಡೆ ಪ್ರತಿಭನೆ ಮಾಡಿದ್ದರು. ಜುಬಿಲಿ ಸರ್ಕಲ್ ನ್ನು ತಡೆದಿದ್ದರು, ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯುಂಟಾಗಿತ್ತು.
ಐದು ಡ್ರೋನ್ಗಳು ಮತ್ತು 20 ಕ್ಕೂ ಹೆಚ್ಚು ಖಾಸಗಿ ವಿಡಿಯೋಗ್ರಾಫರ್ಗಳು ಪ್ರತಿಭಟನೆಯನ್ನು ಚಿತ್ರೀಕರಿಸಿದ್ದಾರೆ. ನಮ್ಮ ಬಳಿ ಸಿಸಿಟಿವಿ ದೃಶ್ಯಾವಳಿಗಳೂ ಇವೆ. ಕಾನೂನು ಉಲ್ಲಂಘನೆ ನಡೆದಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಪ್ರತಿಭಟನಾಕಾರರು ನಿಗದಿತ ಮಾರ್ಗದಲ್ಲೇ ಸಾಗುವಂತೆ ಮಾಡಲು ನಾಲ್ಕರಿಂದ ಐದು ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿತ್ತು. ಆದರೆ ಕೆಲವರು ಅವನ್ನು ತಳ್ಳಿಹಾಕಿ ಮುಂದೆ ಸಾಗಿದ್ದು, ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾರೆ, ಈ ಗಲಾಟೆಯಲ್ಲಿ ಕೆಲ ಪೊಲೀಸರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದರು.
ಕೆಲವರು ಹಿಂದೆಯೂ ನಿಯಮ ಉಲ್ಲಂಘನೆ ನಡೆದ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದರೆಂಬುದು ನಮಗೆ ಗೊತ್ತಾಗಿದೆ. ಪ್ರತಿಭಟನೆ ವೇಳೆ ನೀರಿನ ಬಾಟಲಿಗಳನ್ನು ಎಸೆದಿರುವುದಕ್ಕೂ ಸಾಕ್ಷ್ಯಗಳಿವೆ. ಆದರೆ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದರು.
ಬಿಜೆಪಿ ಪ್ರತಿಭಟನಾ ರ್ಯಾಲಿಗೆ ಶ್ರೀನಗರ ಸರ್ಕಲ್ನಿಂದ ಮಿಷಿಗನ್ ಕಾಂಪೌಂಡ್ವರೆಗೆ ಅನುಮತಿ ನೀಡಲಾಗಿತ್ತು, ಆದರೆ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಪ್ರತಿಭಟನೆಗೆ ಅನುಮತಿ ನೀಡಲಾಗಿರಲಿಲ್ಲ, ಅವರು ಬಿಜೆಪಿ ಜೊತೆ ಸೇರಿ ಪ್ರತಿಭಟನೆಯಲ್ಲಿ ಭಾಗವಹಿಸಿದರು ಎಂದು ಶಶಿ ಕುಮಾರ್ ಹೇಳಿದರು.
