ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳನ್ನು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿದೆ. ಬೆಂಗಳೂರು: ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳನ್ನು ವಿಶೇಷ ನ್ಯಾಯಾಲಯ ಬಿಡುಗಡೆ ಮಾಡಿದೆ.
ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಿ.ಜಿ.ಕೃಷ್ಣಮೂರ್ತಿ ಅಲಿಯಾಸ್ ಭಾಸ್ಕರ್ (35), ಶಿವಮೊಗ್ಗ ಜಿಲ್ಲೆಯ ಹೊಸಗದ್ದೆ ಪ್ರಭಾ ಅಲಿಯಾಸ್ ನೇತ್ರ (24), ಚಿಕ್ಕಮಗಳೂರು ಜಿಲ್ಲೆಯ ಸಾವಿತ್ರಿ ಅಲಿಯಾಸ್ ಉಷಾ (18) ಎಂಬುವವರನ್ನು ನ್ಯಾಯಾಲಯ ಬಿಡಗುಡೆ ಮಾಡಿದೆ.
ಇದನ್ನೂ ಓದಿ: ಕೇರಳ: ಕರ್ನಾಟಕದ ನಕ್ಸಲ್ ನಾಯಕರಾದ ಬಿ.ಜಿ. ಕೃಷ್ಣಮೂರ್ತಿ ಮತ್ತು ಸಾವಿತ್ರಿ ಬಂಧನ!
ಮೂವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ಹೀಗಾಗಿ ಐಪಿಸಿ ಮತ್ತು ಯುಎಪಿಎಯ ನಿಬಂಧನೆಗಳ ಅಡಿಯಲ್ಲಿ ಆರೋಪ ಹೊರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶ ಗಂಗಾಧರ ಸಿ.ಎಂ ತೀರ್ಪಿನಲ್ಲಿ ಹೇಳಿದ್ದಾರೆ.
ಆರೋಪಿ ನಂ.1 ರಮೇಶ್ ಅವರ ಸ್ವಯಂಪ್ರೇರಿತ ಹೇಳಿಕೆಯನ್ನು ಹೊರತುಪಡಿಸಿ, ಆರೋಪಿಗಳು ಮಲಪ್ಪುರಂನಲ್ಲಿ ಸಭೆ ನಡೆಸಿದ್ದಾರೆಂದು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮೇ 2016 ರಲ್ಲಿ ಕೇರಳದ ಮಲಪ್ಪುರಂನ ಪಶ್ಚಿಮ ಘಟ್ಟಗಳಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಡೆಸಲು ಮತ್ತು ಅದೇ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪೊಲೀಸರ ಮೇಲೆ ದಾಳಿ ನಡೆಸಲು ಸಂಚು ರೂಪಿಸಲು ಸಭೆ ನಡೆದಿದ್ದು, ಈ ಸಭೆಯಲ್ಲಿ ಹಾಜರಾಗಿದ್ದಾರೆಂದು ಕೃಷ್ಣಮೂರ್ತಿ, ನೇತ್ರ ಮತ್ತು ಸಾವಿತ್ರಿಯವರ ವಿರುದ್ಧ ಪ್ರಕರಣ ದಾಖಲಾಗಿತ್ತು.