ಬೆಳಗಾವಿ: ‘ನಾನು ಯಾವುದೇ ತಪ್ಪು ಹೇಳಿಕೆಯನ್ನು ನೀಡಿಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ’ ಎಂದು ವಸತಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಸ್ಪಷ್ಟಣೆ ನೀಡಿದ್ದಾರೆ.
ಸೋಮವಾರ ಸುವರ್ಣಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಸದನ ಡಿ.4ರಿಂದ ಆರಂಭವಾಗಿದೆ. ಮೊದಲ ವಾರ ಏನೂ ಮಾತಾಡಿಲ್ಲ. ಎರಡನೇ ವಾರ ಇದ್ದಕ್ಕಿದ್ದ ಹಾಗೆ ಈ ವಿಷಯ ಎತ್ತಿಕೊಳ್ಳುವ ಅಗತ್ಯವಾದರೂ ಏನಿತ್ತು?. ಸಭೆಯಲ್ಲಿ ಯಾರೋ ಒಬ್ಬ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಮಾನ ಅವಕಾಶ ಕೊಡುವುದಿಲ್ಲ ಎಂದು ಪ್ರಶ್ನಿಸಿದ್ದ.
ಆ ಸಂದರ್ಭದಲ್ಲಿ ನಿನ್ನ ಭಾವನೆ ತಪ್ಪಿದೆ. ಕರ್ನಾಟಕದಲ್ಲಿ ಯು.ಟಿ.ಖಾದರ್ ಅವರನ್ನು ಸ್ಪೀಕರ್ ಮಾಡಿದ್ದಾರೆ. ಸ್ಪೀಕರ್ ಖಾದರ್ ಅವರಿಗೆ ನಾನೂ ಸೇರಿದಂತೆ ಬಿಜೆಪಿಯವರು ನಮಸ್ಕಾರ ಮಾಡಬೇಕು ಎಂದು ಹೇಳಿದ್ದೇನೆ.
ಇದು ಹೇಗೆ ಅಪಮಾನ ಆಗುತ್ತದೆ. ಪೀಠಕ್ಕೆ ಎಲ್ಲರೂ ನಮಸ್ಕಾರ ಮಾಡಲೇಬೇಕು ತಾನೇ. ಕಾಂಗ್ರೆಸ್ ಪಕ್ಷ ಸ್ಪೀಕರ್ ಸ್ಥಾನ ಕೊಟ್ಟಿದೆ. ಯಾರೇ ಇದ್ದರೂ ಪೀಠಕ್ಕೆ ನಮಸ್ಕಾರ ಮಾಡಲೇಬೇಕಲ್ಲವೇ? ಸ್ಪಷ್ಟನೆ ನೀಡಲು ನಾನು ಸಿದ್ದವಾಗಿದ್ದೇನೆ. ಬಿಜೆಪಿ ಅವರಿಗೆ ಯಾವ ವಿಷಯ ಇರಲಿಲ್ಲ. ಹಾಗಾಗಿ ಇವತ್ತು ಈ ವಿಷಯ ತೆಗೆದುಕೊಂಡಿದ್ದಾರೆ’ ಎಂದು ಝಮೀರ್ ಅಹ್ಮದ್ ಖಾನ್ ವಾಗ್ದಾಳಿ ನಡೆಸಿದರು.
