Home Uncategorized ನವೀನ್, ಮುಜೀಬ್, ಫಾರೂಕಿ ಐಪಿಎಲ್-2024ರಲ್ಲಿ ಆಡುವುದು ಅನುಮಾನ

ನವೀನ್, ಮುಜೀಬ್, ಫಾರೂಕಿ ಐಪಿಎಲ್-2024ರಲ್ಲಿ ಆಡುವುದು ಅನುಮಾನ

35
0

ಹೊಸದಿಲ್ಲಿ: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ)ತನ್ನ ಮೂವರು ಆಟಗಾರರಾದ ನವೀನ್‌ವುಲ್ ಹಕ್, ಮುಜೀಬ್ವುರ್ರಹ್ಮಾನ್ ಹಾಗೂ ಫಝಲ್ ಹಕ್ ಫಾರೂಕಿಗೆ ಎರಡು ವರ್ಷಗಳ ಕಾಲ ನಿರಾಕ್ಷೇಪಣಾ ಪ್ರಮಾಣಪತ್ರ(ಎನ್ಒಸಿ)ವನ್ನು ನೀಡದಿರಲು ನಿರ್ಧರಿಸಿದ್ದು ಈ ಹಿನ್ನೆಲೆಯಲ್ಲಿ 2024ರ ಐಪಿಎಲ್ ನಲ್ಲಿ ಈ ಮೂವರು ಆಟಗಾರರು ಪಾಲ್ಗೊಳ್ಳುವ ಕುರಿತು ಅನಿಶ್ಚಿತತೆ ತಲೆದೋರಿದೆ.

ಎಸಿಬಿ ಶಿಸ್ತಿನ ಕ್ರಮವಾಗಿ ಮೂವರು ಆಟಗಾರರ ವಾರ್ಷಿಕ ಕೇಂದ್ರ ಒಪ್ಪಂದಗಳನ್ನು ವಿಳಂಬಗೊಳಿಸಲು ನಿರ್ಧರಿಸಿದೆ ಎಂದು ಸೋಮವಾರ ಮೂಲಗಳು ತಿಳಿಸಿವೆ.

ವಾರ್ಷಿಕ ಕೇಂದ್ರ ಒಪ್ಪಂದಗಳಿಂದ ಬಿಡುಗಡೆ ಮಾಡುವ ಉದ್ದೇಶದಿಂದ ಮುಂದಿನ ಎರಡು ವರ್ಷಗಳ ತನಕ ಮೂವರು ಆಟಗಾರರಿಗೆ ಎನ್ಒಸಿಗಳನ್ನು ನೀಡದಿರಲು ಮಂಡಳಿಯು ನಿರ್ಧರಿಸಿದೆ ಎಂದು ವರದಿಯಾಗಿದೆ.

ಲಕ್ನೊ ಸೂಪರ್ ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ಕಳೆದ ವಾರ ನಡೆದ ಐಪಿಎಲ್-2024ಕ್ಕಾಗಿ ನಡೆದ ಆಟಗಾರರ ಹರಾಜಿನಲ್ಲಿ ಕ್ರಮವಾಗಿ ನವೀನ್ ಹಾಗೂ ಫಾರೂಕಿ ಅವರನ್ನು ತನ್ನಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿದ್ದವು. ಕೋಲ್ಕತಾ ನೈಟ್ ರೈಡರ್ಸ್ ತಂಡ ಸ್ಪಿನ್ನರ್ ಮುಜೀಬ್ರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.

ಹೇಳಿಕೆ ನೀಡುವ ಮೊದಲು ಕಾದು ನೋಡಲು ಬಯಸಿರುವ ಫ್ರಾಂಚೈಸಿಗಳಿಗೆ ಎಸಿಬಿಯ ನಿರ್ಧಾರವು ಹಿನ್ನಡೆಯಾಗಿದೆ.

ಮೂವರು ಆಟಗಾರರು ಕೇಂದ್ರ ಒಪ್ಪಂದಕ್ಕೆ ಸಹಿ ಹಾಕಲು ಉತ್ಸುಕರಾಗಿರಲಿಲ್ಲ. ರಾಷ್ಟ್ರೀಯ ಜವಾಬ್ದಾರಿ ಎಂದು ಪರಿಗಣಿಸಲಾದ ಅಫ್ಘಾನಿಸ್ತಾನಕ್ಕಾಗಿ ಆಡುವುದಕ್ಕಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ಆದ್ಯತೆ ನೀಡಿದ್ದರು ಎಂದು ಎಸಿಬಿ ತಿಳಿಸಿದೆ.

ಮುಂದಿನ ವರ್ಷದ ಮಾರ್ಚ್ 22ರಂದು ಐಪಿಎಲ್ ಆರಂಭವಾಗುವ ನಿರೀಕ್ಷೆ ಇದೆ. ಎಸಿಬಿ ತನ್ನ ನಿರ್ಧಾರಕ್ಕೆ ಅಂಟಿಕೊಳ್ಳಲಿದೆಯೇ ಅಥವಾ ಅಂತಿಮವಾಗಿ ತನ್ನ ನಿಲುವು ಸಡಿಲಿಸಿ ಆಟಗಾರರಿಗೆ ಲೀಗ್ನಲ್ಲಿ ಭಾಗವಹಿಸಲು ಅವಕಾಶ ನೀಡುವುದೋ ಎಂಬ ಕುತೂಹಲ ಮೂಡಿದೆ.

ಐಪಿಎಲ್ ಗಿಂತ ಮೊದಲು ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಭಾರತ ವಿರುದ್ಧ ಜನವರಿ 11ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟಿ-20 ಸರಣಿಯನ್ನು ಆಡಲಿದೆ.

LEAVE A REPLY

Please enter your comment!
Please enter your name here