ಕಲಬುರಗಿ:
ನೆರೆ ಪ್ರವಾಹ ವೀಕ್ಷಣೆ ಕೈಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಒಬ್ಬೇ ಒಬ್ಬ ಸಂತ್ರಸ್ಥರ ಕಷ್ಟ- ಸುಖ ಆಲಿಸಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಗಳು ಕೇವಲ ಮೇಲಿಂದ ಹಾರಾಟ ಮಾಡಿ ಹೋಗಿದ್ದಾರೆ. ಮೇಲಿಂದ ಅವರಿಗೆ ಏನು ಕಾಣಿಸಿತೋ ಗೊತ್ತಿಲ್ಲ ಎಂದು ಅವರು ಟೀಕಿಸಿದರು .
ರಾಜ್ಯದ 23 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ರೈತರು, ಜನ ಸಂಕಷ್ಟದಲ್ಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಗೋವಿಂದ ಕಾರಜೋಳ ಅವರು ಜಿಲ್ಲೆಗಳಲ್ಲಿ ಬೀಡು ಬಿಟ್ಟು ಪರಿಹಾರ ಕೈಗೊಳ್ಳಬೇಕಿತ್ತು. ಆದರೆ, ಕಲಬುರಗಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮೇ ನಿಂದ ಜಿಲ್ಲೆ ಕಡೆಗೆ ತಲೆ ಹಾಕಿಲ್ಲ ಎಂದು ಅವರು ಕುಟುಕಿದರು.
ಕಂದಾಯ ಸಚಿವ ಆರ್ ಅಶೋಕ ಅವರು ಪಿಕ್ ನಿಕ್ ಬಂದಂತೆ ಕಲಬುರಗಿಗೆ ಬಂದು ಹೋಗಿದ್ದಾರೆ. ಪ್ರವಾಹದಿಂದ ಜನ ಸಂಕಷ್ಟದಲ್ಲಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ನಯಾಪೈಸೆ ಹಣ ಬಿಡುಗಡೆ ಮಾಡಿಲ್ಲ. ನೆರೆ ಸಂಕಷ್ಟ ನಿಭಾಹಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದೇ ಕಾರಣಕ್ಕೆ ಸರ್ಕಾರಕ್ಕೆ ಧಮ್ ಇಲ್ಲ ಎಂದಿದ್ದೇನೆ. ಆದರೆ, ಕೆಲವರು ಇದನ್ನು ದೈಹಿಕ ತಾಕತ್ತಿಗೆ ಹೋಲಿಸುತ್ತಿದ್ದು, ಸಿದ್ರಾಮಯ್ಯನಿಗಿಂತ ನಾಲ್ಕು ಪಟ್ಟು ದಮ್ ಇದೆ ಎನ್ನುತ್ತಿದ್ದಾರೆ. ದೈಹಿಕ್ ದಮ್ ಬಗ್ಗೆ ನಾನು ಮಾತಾಡಿಲ್ಲ. ಸರ್ಕಾರಕ್ಕೆ ಪರಿಹಾರ ಕೊಡಿಸುವ ದಮ್ ಇಲ್ಲ ಎಂದಿದ್ದೇನೆ ಎಂದರು.
ಈಗಲೂ ದಮ್ ಇದ್ದರೆ ಕೂಡಲೇ ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಲಿ ಎಂದು ಸವಾಲು ಹಾಕಿದ ಅವರು, ನೆರೆ ನಿರ್ವಹಣೆಯ ಬಗ್ಗೆ ಚರ್ಚೆಗಾಗಿ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು. ‘ಹಿಂದಿನ ಸರ್ಕಾರ ಉರುಳಿಸುವಲ್ಲಿ ಸಿದ್ದರಾಮಯ್ಯ ಪಾತ್ರ ಇತ್ತು ಎಂಬ ಕುಮಾರಸ್ವಾಮಿ ಹೇಳಿಕೆಗೆ ನಾನು ಯಾವತ್ತೂ ಹೀರೋ…. ವಿಲನ್ ಅಲ್ಲವೇ ಅಲ್ಲ.. ಎಂದು ತಿರುಗೇಟು ನೀಡಿದರು.
ನನ್ನನ್ನು ಸುಮ್ಮನೆ ಕೆಣಕಬೇಡಿ ಎಂಬ ಎಚ್ಡಿಕೆಗೆ ಎಚ್ಚರಿಕೆಗೆ ನಸುನಕ್ಕ ಸಿದ್ರಾಮಯ್ಯ ಅವರು ಸುಮ್ಮಸುಮ್ಮನೆ ನಾನು ಯಾರನ್ನೂ ಕೆಣಕುವುದಿಲ್ಲ. ನನ್ನ ಮೇಲೆ ಟೀಕೆ ಮಾಡಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ. ಆ ಉತ್ತರದಿಂದ ಅವರಿಗೆ ಮುಜುಗರವಾಗಿದ್ದರೆ ನಾನೇನು ಮಾಡಲಿ ? ಎಂದು ಅವರು ಪ್ರಶ್ನಿಸಿದರು.
ಸಿದ್ರಾಮಯ್ಯ ಸರ್ಕಾರ ಬೀಳಿಸಿದ್ದು ಎನ್ನುತ್ತಾರೆ. ಕುಣಿಯಲು ಬಾರದವರು ನೆಲ ಡೊಂಕು ಅಂದಂತಿದೆ ಈ ಮಾತು. ಶಾಸಕರ ಕಷ್ಟ-ಸುಖ ಆಲಿಸಿ ಅವರ ವಿಶ್ವಾಸ ಗಳಿಸಬೇಕಿರುವುದು ಮುಖ್ಯಮಂತ್ರಿ ಗಳ ಕೆಲಸ ಅಲ್ಲವೇ ? ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸಿದರೆ ಇದು ಸಾಧ್ಯವೇ ?. ಈ ವಿಚಾರ ಹೇಳಿದ್ದಕ್ಕೆ ನನ್ನನ್ನು ವಿಲನ್ ಎನ್ನುತ್ತಾರೆ.. ನಾನು ಯಾವತ್ತಿಗೂ ವಿಲನ್ ಅಲ್ಲವೇ ಅಲ್ಲ. ನನ್ನದೇನಿದ್ದರೂ ಹೀರೋ ಪಾತ್ರ ಎಂದು ಅವರು ಹೇಳಿದರು.