ಬೆಂಗಳೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯದ ರಣಕಹಳೆಯನ್ನು ಮೊಳಗಿಸಿದ ಕಿತ್ತೂರು ರಾಣಿ ಚೆನ್ನಮ್ಮನ ನೆನಪಿನಲ್ಲಿ ‘ನಾನೂ ರಾಣಿ ಚೆನ್ನಮ್ಮ’ ರಾಷ್ಟ್ರೀಯ ಆಂದೋಲನಕ್ಕೆ ಫೆ.21ರಂದು ಕಿತ್ತೂರಿನಲ್ಲಿ ಚಾಲನೆ ನೀಡಲಾಗುವುದು ಎಂದು ವಕೀಲೆ ಅಖಿಲಾ ವಿದ್ಯಾಸಂದ್ರ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ವಸಾಹತುಶಾಹಿಯ ವಿರುದ್ಧ ಭಾರತದಲ್ಲಿ ಹೋರಾಡಿದ ಮೊಟ್ಟಮೊದಲ ಮಹಿಳಾ ಹೋರಾಟಗಾರರ ಪಟ್ಟಿಯಲ್ಲಿ ರಾಣಿ ಚೆನ್ನಮ್ಮ ಬರುತ್ತಾಳೆ. ಕರ್ನಾಟಕದ ಜನಪದರಲ್ಲಿ ಅವರಿಗೆ ಸದಾ ಗೌರವ, ಅಭಿಮಾನದ ಸ್ಥಾನವಿದೆ. ವೀರರಾಣಿ ಎಂದೇ ಎಲ್ಲರೂ ಆಕೆಯನ್ನು ನೆನೆಯುತ್ತಾರೆ ಎಂದರು.
ಕಿತ್ತೂರು ರಾಣಿ ಚೆನ್ನಮ್ಮ 1778ರ ಅಕ್ಟೋಬರ್ 23ರಂದು ಬೆಳಗಾವಿ ಸಮೀಪದ ಕಾಕತಿಯಲ್ಲಿ ಜನಿಸಿದ್ದು, ಚಿಕ್ಕವಯಸ್ಸಿನಲ್ಲೇ ಕತ್ತಿವರಸೆ, ಕುದುರೆ ಸವಾರಿ ಮತ್ತು ಬಿಲ್ಲುವಿದ್ಯೆಗಳನ್ನು ಕಲಿತ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಿ ಕಿತ್ತೂರನ್ನು ಉಳಿಸಿಕೊಳ್ಳಲು ತನ್ನ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟಿದ್ದಳು. 1824ರಲ್ಲಿ ಚೆನ್ನಮ್ಮ ಸ್ವಾತಂತ್ರ್ಯದ ರಣಕಹಳೆಯನ್ನು ಮೊಳಗಿಸಿ ಇಂದಿಗೆ ಎರಡು ನೂರು ವರ್ಷಗಳು ಸಂದಿವೆ ಎಂದು ಅವರು ನೆನಪಿಸಿಕೊಂಡರು.
ನಮ್ಮ ಪ್ರಜಾಪ್ರಭುತ್ವವನ್ನು, ಸಂವಿಧಾನವನ್ನು ಸಂರಕ್ಷಿಸುವುದಕ್ಕಾಗಿ ಮತ್ತು ದ್ವೇಷ ಅಳಿಸಿ ಪ್ರೀತಿ ಬೆಳೆಸುವುದಕ್ಕಾಗಿ ಭಾರತದ ಎಲ್ಲಾ ಮೂಲೆಗಳಿಂದ ಮಹಿಳೆಯರು ಬರುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೋರಾಟ ಮತ್ತು ಸಾಮಾಜಿಕ ಸಂಘಟನೆಯಲ್ಲಿ ನಿರತರಾಗಿರುವ ಅನೇಕ ಪ್ರಮುಖರು ಕಿತ್ತೂರಿನಲ್ಲಿ ನಡೆಯುವ ಜಾಥಾದಲ್ಲಿ ಭಾಗವಹಿಸುವರು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಸಮಾಜ ಪರಿವರ್ತನ ಸಮುದಾಯ, ಮಹಿಳಾ ಮುನ್ನಡೆ, ನಾವೆದ್ದು ನಿಲ್ಲದಿದ್ದರೆ, ರಾಷ್ಟ್ರ ಸೇವಾದಳ, ಸಮತಾ ವೇದಿಕೆ, ಸೌಹಾರ್ದ ಕರ್ನಾಟಕ ಸೇರಿದಂತೆ ಮತ್ತಿತರ ಸಂಘಟನೆಗಳು ಭಾಗವಹಿಸಲಿವೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮೀನಾಕ್ಷಿ ಬಾಳಿ, ಜ್ಯೋತಿ ಎ., ಮಮತಾ, ಗೀತಾ ಮೆನನ್, ಗೀತಾ ಮುಂತಾದವರು ಉಪಸ್ಥಿತರಿದ್ದರು.