ನಾಮಪತ್ರ ಹಿಂಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಬೆಂಗಳೂರು: ನಾಮಪತ್ರ ಹಿಂಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಾಮಪತ್ರ ವಾಪಸ್ ಪಡೆಯಲು ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ಅವರಿಗೆ ಆಮಿಷ ಒಡ್ಡಿರುವ ಆಡಿಯೊ ತುಣುಕಿಗೆ ಸಂಬಂಧಿಸಿದಂತೆ ಸೋಮಣ್ಣ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಎಫ್‌ಐಆರ್‌ನಲ್ಲಿ ಸೋಮಣ್ಣ ಅವರಿಗೆ ಸಂಬಂಧಿಸಿದಂತೆ ವಿವರಗಳು ಇಲ್ಲ. ಅಪರಿಚಿತ (ಅನ್ನೌನ್) ಎಂದು ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಆಡಿಯೊದಲ್ಲಿ ಕೇಳಿ ಬಂದಿರುವ ಇನ್ನೆರಡು ಹೆಸರುಗಳಾದ ಸುದೀಪ್ ಮತ್ತು ನಟರಾಜು ಅವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಮೈಸೂರು: ಬಿಜೆಪಿ ಪ್ರಚಾರದ ರಥದ ಮೇಲೆ ಕಲ್ಲು ತೂರಾಟ: ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಪಾರು, ಹಲವರಿಗೆ ಗಾಯ
ಚುನಾವಣಾ ಫ್ಲೈಯಿಂಗ್ ಸ್ಕ್ಯಾಡ್‌ನ ಮ್ಯಾಜಿಸ್ಟ್ರೇಟ್ ಡಾ.ಬಿ.ಆರ್.ಜಯಣ್ಣ ಅವರು ನೀಡಿರುವ ದೂರಿನ ಆಧಾರದಲ್ಲಿ ಚಾಮರಾಜನಗರ ಪಟ್ಟಣ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಎಫ್ ಐಆರ್ ನಲ್ಲಿ ಉಲ್ಲೇಖವಾಗಿರುವಂತೆ ವಿ ಸೋಮಣ್ಣ ಅವರನ್ನು ಮೊದಲ ಆರೋಪಿ ಎಂದು ಉಲ್ಲೇಖಿಸಲಾಗಿದ್ದು, ನಟರಾಜು ಅವರು ಎರಡನೇ ಮತ್ತು ಸುದೀಪ್ ಮೂರನೇ ಆರೋಪಿಯಾಗಿದ್ದಾರೆ.
ನಾಮಪತ್ರ ವಾಪಸ್ ಪಡೆಯುವ ದಿನದಂದು ಸಚಿವ, ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರು ಜೆಡಿಎಸ್‌ನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಕರೆ ಮಾಡಿ ನಾಮಪತ್ರ ವಾಪಸ್ ತೆಗೆದುಕೊಳ್ಳುವಂತೆ ಸೂಚಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹತಾಶೆ ಮತ್ತು ಸೋಲಿನ ಭಯದಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಂದ ಕುಕೃತ್ಯ; ವಿ ಸೋಮಣ್ಣ- ಸಂಸದ ಪ್ರತಾಪ್ ಸಿಂಹ ಕಿಡಿ
ಇಷ್ಟಕ್ಕೂ ಆಡಿಯೋದಲ್ಲೇನಿತ್ತು?
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನಸ್ವಾಮಿ (ಆಲೂರು ಮಲ್ಲು) ಅವರಿಗೆ ಸೋಮಣ್ಣ ಕರೆ ಮಾಡಿ ನಾಮಪತ್ರ ವಾಪಸ್ ಪಡೆಯುವಂತೆ ಹೇಳುವ ಆಡಿಯೊ ತುಣುಕು ವಾಟ್ಸ್ ಆ್ಯಪ್ ನಲ್ಲಿ ಹರಿದಾಡುತ್ತಿದೆ. ‘ಸರ್ಕಾರದ ಬರುತ್ತದೆ. ಗೂಟದ ಕಾರು ಕೊಡುತ್ತೇವೆ’ ಎಂದು ಹೇಳಿದ್ದ ಆಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸೋಮಣ್ಣ ಅವರು ಕರೆ ಮಾಡಿದ್ದನ್ನು ಮಲ್ಲಿಕಾರ್ಜುನ ಸ್ವಾಮಿ ಅವರು ದೃಢಪಡಿಸಿದ್ದರು.
ಇದನ್ನೂ ಓದಿ: ನಾಮಪತ್ರ ವಾಪಸ್ ಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ವಿ ಸೋಮಣ್ಣ ಕರೆ: ಆಡಿಯೋ ವೈರಲ್, ಕಾಂಗ್ರೆಸ್ ಕಿಡಿ
‘ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಿನಗೆ ಗೂಟದ ಕಾರು ಕೋಡ್ತೀವಿ. ಮೊದಲು ವಾಪಸ್ ತಗೊ. ‘ತೊಟ್ಟಿ ನನ್ನ ಮಗನ ಮಾತು ಕೇಳಿ ನಿತ್ತಿದ್ದೀಯಾ. ಮೊದಲು ತೆಗಿ. ಆಮೇಲೆ ಎಲ್ಲ ಮಾತನಾಡೋಣ. ನಿನ್ನ ಬದುಕಿಗೆ ಏನು ಬೇಕೋ ಅದು ಮಾಡ್ತೇನೆ. ಹಿತ ಕಾಪಾಡ್ತೇನೆ’ ಎಂದು ಸೋಮಣ್ಣ ಹೇಳಿರುವುದು ಆಡಿಯೊದಲ್ಲಿದೆ.