ಕ್ರೈಸ್ಟ್ ಚರ್ಚ್ : ಪಾಕಿಸ್ತಾನ ವಿರುದ್ಧ ಶುಕ್ರವಾರ ನಡೆದ ನಾಲ್ಕನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಡ್ಯಾರಿಲ್ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ ದಾಖಲಿಸಿದ 139 ರನ್ ಜೊತೆಯಾಟದ ನೆರವಿನಿಂದ ನ್ಯೂಝಿಲ್ಯಾಂಡ್ 7 ವಿಕೆಟ್ ಅಂತರದಿಂದ ಸುಲಭ ಜಯ ಸಾಧಿಸಿದೆ.
ಮಿಚೆಲ್ ಹಾಗೂ ಫಿಲಿಪ್ಸ್ ಅರ್ಧಶತಕದ ಮೂಲಕ ಟಿ-20ಯಲ್ಲಿ ಕಿವೀಸ್ ಪರ 4ನೇ ವಿಕೆಟ್ ನಲ್ಲಿ ಗರಿಷ್ಠ ರನ್ ಜೊತೆಯಾಟ ನಡೆಸಿದರು. ಮಾತ್ರವಲ್ಲ ಕಿವೀಸ್ ತಂಡವನ್ನು ಸರಣಿ ಕ್ಲೀನ್ ಸ್ವೀಪ್ ಸಾಧಿಸುವತ್ತ ಕೊಂಡೊಯ್ದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ನ್ಯೂಝಿಲ್ಯಾಂಡ್ 18.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು.
ಪಾಕಿಸ್ತಾನದ ನಾಯಕ ಶಾಹೀನ್ ಅಫ್ರಿದಿ(3-34) ನ್ಯೂಝಿಲ್ಯಾಂಡ್ ನ ಅಗ್ರ ಕ್ರಮಾಂಕದ ಬ್ಯಾಟರ್ಗಳಾದ ಫಿನ್ ಅಲೆನ್(8 ರನ್), ಟಿಮ್ ಸೆಫರ್ಟ್(0) ಹಾಗೂ ವಿಲ್ ಯಂಗ್(4 ರನ್) ವಿಕೆಟನ್ನು ಉರುಳಿಸಿದರು. ಆಗ 3ನೇ ಓವರ್ನಲ್ಲಿ ಕಿವೀಸ್ 20 ರನ್ ಗೆ 3 ವಿಕೆಟ್ ಗಳನ್ನು ಕಳೆದುಕೊಂಡಿತ್ತು.
ಮಿಚೆಲ್(ಔಟಾಗದೆ 72 ರನ್, 44 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ಫಿಲಿಪ್ಸ್(ಔಟಾಗದೆ 70 ರನ್, 52 ಎಸೆತ, 5 ಬೌಂಡರಿ, 3 ಸಿಕ್ಸರ್)ಎಚ್ಚರಿಕೆಯಿಂದ ಶತಕದ ಜೊತೆಯಾಟ ನಡೆಸಿ 11 ಎಸೆತಗಳು ಬಾಕಿ ಇರುವಾಗಲೇ ತಂಡಕ್ಕೆ ಜಯ ತಂದುಕೊಟ್ಟರು.
ಹ್ಯಾಮಿಲ್ಟನ್ನ ಹಾಗ್ಲೆ ಓವಲ್ ನಲ್ಲಿಯೇ ರವಿವಾರ ನಡೆಯಲಿರುವ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ಗೆ ಸರಣಿಯನ್ನು 5-0 ಅಂತರದಿಂದ ಗೆಲ್ಲುವ ಅವಕಾಶ ಮುಕ್ತವಾಗಿದೆ.
*ಪಾಕಿಸ್ತಾನ 158/5: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಾಕಿಸ್ತಾನದ ಪರ ಆರಂಭಿಕ ಬ್ಯಾಟರ್ ಮುಹಮ್ಮದ್ ರಿಝ್ವಾನ್ 63 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ ಔಟಾಗದೆ 90 ರನ್ ಸಿಡಿಸಿ ಏಕಾಂಗಿ ಹೋರಾಟ ನೀಡಿದರು. ಅವರಿಗೆ ಉಳಿದ ಆಟಗಾರರಿಂದ ಸೂಕ್ತ ಬೆಂಬಲ ಸಿಗಲಿಲ್ಲ.
ವೇಗಿಗಳಾದ ಮ್ಯಾಟ್ ಹೆನ್ರಿ(2-22) ಹಾಗೂ ಲಾಕಿ ಫರ್ಗ್ಯುಸನ್(2-27) ನೇತೃತ್ವದ ನ್ಯೂಝಿಲ್ಯಾಂಡ್ ನ ಶಿಸ್ತುಬದ್ಧ ಬೌಲಿಂಗ್ ದಾಳಿಯ ಎದುರು ರಿಝ್ವಾನ್ ದಿಟ್ಟ ಪ್ರದರ್ಶನ ನೀಡಿದರು. 31ರ ಹರೆಯದ ರಿಝ್ವಾನ್ ತನ್ನ 2ನೇ ಟಿ-20 ಅಂತರ್ರಾಷ್ಟ್ರೀಯ ಶತಕ ಸಿಡಿಸುವ ವಿಶ್ವಾಸದಲ್ಲಿದ್ದರು. ಆದರೆ 20 ಓವರ್ ಆಟ ಮುಗಿದ ಕಾರಣ ಅವರು 10 ರನ್ನಿಂದ ಶತಕ ವಂಚಿತರಾದರು.
ಆಲ್ರೌಂಡರ್ ಮುಹಮ್ಮದ್ ನವಾಝ್ 20ಕ್ಕೂ ಅಧಿಕ ರನ್ ಗಳಿಸಿದ ಪಾಕ್ ನ ಇನ್ನೋರ್ವ ಬ್ಯಾಟರ್ ಆಗಿದ್ದಾರೆ. ಆ್ಯಡಮ್ ಮಿಲ್ನೆ ತನ್ನ ಅಂತಿಮ ಓವರ್ನಲ್ಲಿ ಸತತ 3 ಸಿಕ್ಸರ್ ಬಿಟ್ಟುಕೊಟ್ಟರು. ನವಾಝ್ 9 ಎಸೆತಗಳಲ್ಲಿ 21ರ ನ್ ಗಳಿಸಿದರು.