ಹೊಸದಿಲ್ಲಿ: ಭಾರತದಲ್ಲಿ ಶ್ರೀಮಂತರ ಸಂಖ್ಯೆ 2027ರ ವೇಳೆಗೆ 10 ಕೋಟಿಯನ್ನು ತಲುಪಲಿದೆ. ವಿಶ್ವನಕ್ಷೆಯಲ್ಲಿ ನೋಡಿದರೆ ಇಡೀ ವಿಶ್ವದಲ್ಲಿ ಕೇವಲ 14 ದೇಶಗಳಲ್ಲಿ ಮಾತ್ರ 10 ಕೋಟಿಗಿಂತ ಅಧಿಕ ಶ್ರೀಮಂತರಿದ್ದಾರೆ. ಈ ಭಾರತೀಯರು ಈಗಾಗಲೇ ಗ್ರಾಹಕ ಮತ್ತು ಸಂಪತ್ತು ಸೃಷ್ಟಿಯ ಹಂತವನ್ನು ತಲುಪಿದ್ದು, ಐಷಾರಾಮಿ ಸರಕುಗಳಿಂದ ಹಿಡಿದು ಷೇರು ಮಾರುಕಟ್ಟೆಯ ವರೆಗೆ, ಎಸ್ ಯುವಿಯಿಂದ ಹಿಡಿದು ಆಭರಣಗಳ ವರೆಗೆ ಪ್ರತಿಯೊಂದರಲ್ಲೂ ದೊಡ್ಡ ಪರಿಣಾಮ ಬೀರಲಿದ್ದಾರೆ.
ಗೋಲ್ಡ್ ಮನ್ ಸ್ಯಾಚ್ಸ್ ನಡೆಸಿದ ಅಧ್ಯಯನ ವರದಿಯೊಂದು ಈ ಅಂದಾಜು ಮಾಡಿದ್ದು, ಶುಕ್ರವಾರ ವರದಿಯನ್ನು ಬಿಡುಗಡೆ ಮಾಡಲಾಗಿದೆ. “ದ ರೈಸ್ ಆಫ್ ಅಫ್ಲೂಯೆಂಟ್ ಇಂಡಿಯಾ” ಎನ್ನುವ ವರದಿಯ ಪ್ರಕಾರ ವಾರ್ಷಿಕ 10 ಸಾವಿರ ಡಾಲರ್ ಗಿಂತ ಅಧಿಕ ಆದಾಯ ಇರುವ ಅಂದರೆ ಪ್ರಸ್ತುತ ವಿನಿಯಮ ದರದಲ್ಲಿ 8.3 ಲಕ್ಷ ರೂಪಾಯಿ ಆದಾಯ ಇರುವವರನ್ನು ಶ್ರೀಮಂತರು ಎಂದು ಪರಿಗಣಿಸಲಾಗುತ್ತದೆ.
ಈ ವರ್ಗಕ್ಕೆ ಸೇರಿದ ಜನತೆ ಪ್ರಸ್ತುತ 60 ದಶಲಕ್ಷ ಇದ್ದು, 2027ರ ಒಳಗಾಗಿ ಶೇಕಡ 67ರಷ್ಟು ಏರಿಕೆ ಕಂಡು ಈ ಸಂಖ್ಯೆ 10 ಕೋಟಿಯನ್ನು ತಲುಪಲಿದೆ ಎಂದು ಗೋಲ್ಡ್ ಮನ್ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ದುಡಿಯುವ ವರ್ಗದ ಶೇಕಡ 4ರಷ್ಟು ಮಂದಿ ಮಾತ್ರ ವಾರ್ಷಿಕ 10 ಸಾವಿರ ಡಾಲರ್ ಸಂಪಾದಿಸುತ್ತಿದ್ದಾರೆ (ಇದು ಭಾರತದ ತಲಾದಾಯವಾಗಿರುವ 2100 ಡಾಲರ್ ಅಥವಾ 1.75 ಲಕ್ಷ ರೂಪಾಯಿಗೆ ಹೋಲಿಸಿದರೆ ಐದು ಪಟ್ಟು ಅಧಿಕ). ಈ ವರ್ಗ 2019 ರಿಂದ 2023ರ ಅವಧಿಯಲ್ಲಿ ಶೇಕಡ 12ರ ದರದಲ್ಲಿ ಬೆಳೆದಿದ್ದು, ಈ ಅವಧಿಯಲ್ಲಿ ಬೆಳೆದ ಜನಸಂಖ್ಯೆ ಶೇಕಡ 1ರಷ್ಟು ಎಂದು ವರದಿ ವಿವರಿಸಿದೆ.
ಕಳೆದ ಮೂರು ವರ್ಷಗಳಲ್ಲಿ ಶ್ರೀಮಂತ ವರ್ಗದ ವೇಗದ ಪ್ರಗತಿಯು ಈಕ್ವಿಟಿ ಷೇರುಗಳು, ಚಿನ್ನ ಮತ್ತು ಆಸ್ತಿ ಹೀಗೆ ಹಣಕಾಸು ಮತ್ತು ಭೌತಿಕ ಅಸ್ತಿಗಳಲ್ಲಿ ದೊಡ್ಡ ಪ್ರಮಾಣದ ಏರಿಕೆಗೂ ಕಾರಣವಾಗಿದೆ. ಚಿನ್ನ ಹಗೂ ಈಕ್ವಿಟಿಗಳಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬಂದಿದೆ. ಆಸ್ತಿಗಳ ಬೆಲೆಗಳು ಕಳೆದ ಮೂರು- ನಾಲ್ಕು ವರ್ಷಗಳಲ್ಲಿ ಗಣನೀಯ ಏರಿಕೆ ಕಂಡಿವೆ ಎಂದು ವರದಿ ಹೇಳಿದೆ.