Home Uncategorized ನಾಳೆ ಎರಡನೇ ಟ್ವೆಂಟಿ-20 ; ಸರಣಿ ಗೆಲುವಿನತ್ತ ಭಾರತ ಮಹಿಳಾ ತಂಡದ ಚಿತ್ತ

ನಾಳೆ ಎರಡನೇ ಟ್ವೆಂಟಿ-20 ; ಸರಣಿ ಗೆಲುವಿನತ್ತ ಭಾರತ ಮಹಿಳಾ ತಂಡದ ಚಿತ್ತ

23
0

ಹೊಸದಿಲ್ಲಿ: ಮೊದಲ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ 9 ವಿಕೆಟ್ ಗಳ ಅಂತರದಿಂದ ಸುಲಭ ಜಯ ಸಾಧಿಸಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡ ರವಿವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಎದುರಾಳಿ ಆಸ್ಟ್ರೇಲಿಯ ತಂಡವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು ಗೆಲ್ಲುವತ್ತ ಚಿತ್ತ ಹರಿಸಿದೆ.

ಏಕದಿನ ಸರಣಿಯಲ್ಲಿ 0-3 ಅಂತರದಿಂದ ಹೀನಾಯವಾಗಿ ಸೋತಿದ್ದ ಭಾರತ ತಂಡ ಟಿ-20 ಮಾದರಿಯ ಕ್ರಿಕೆಟಿನಲ್ಲಿ ಮರು ಹೋರಾಟ ನೀಡುವಲ್ಲಿ ಯಶಸ್ವಿಯಾಗಿದೆ. ಶುಕ್ರವಾರ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತವು ಆಲ್ ರೌಂಡ್ ಪ್ರದರ್ಶನ ನೀಡಿದೆ.

ಏಕದಿನ ಕ್ರಿಕೆಟ್ನಲ್ಲಿ ಫೀಲ್ಡಿಂಗ್ ವಿಭಾಗದಲ್ಲಿನ ಕಳಪೆ ಪ್ರದರ್ಶನಕ್ಕೆ ಟೀಕೆ ಎದುರಿಸಿದ್ದ ಭಾರತವು ಟಿ-20 ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದೆ.

19ರ ಹರೆಯದ ಟೈಟಾಸ್ ಸಾಧು ನೇತೃತ್ವದ ಬೌಲರ್ ಗಳು ಮೊದಲ ಟಿ-20 ಪಂದ್ಯದ ಮೊದಲಾರ್ಧದಲ್ಲಿ ಆಸ್ಟ್ರೇಲಿಯವನ್ನು ಕಟ್ಟಿಹಾಕಿದರು. ಪವರ್ ಪ್ಲೇ ವೇಳೆ ನಿರ್ಣಾಯಕ ವಿಕೆಟ್ ಗಳನ್ನು ಪಡೆದ ಸಾಧು 17 ರನ್ ನೀಡಿ ನಾಲ್ಕು ವಿಕೆಟ್ ಗಳನ್ನು ಕಬಳಿಸಿ ಭಾರತದ ಪ್ರಾಬಲ್ಯಕ್ಕೆ ಕಾರಣರಾದರು.

ಶೆಫಾಲಿ ವರ್ಮಾ(ಔಟಾಗದೆ 64 ರನ್) ಹಾಗೂ ಸ್ಮತಿ ಮಂಧಾನ(54 ರನ್)ಮೊದಲ ವಿಕೆಟ್ಗೆ 137 ರನ್ ಜೊತೆಯಾಟ ನಡೆಸಿ ಭಾರತದ ಐತಿಹಾಸಿಕ 9 ವಿಕೆಟ್ ಗೆಲುವಿಗೆ ಮುನ್ನುಡಿ ಬರೆದಿದ್ದರು.ತಂಡದ ಫೀಲ್ಡಿಂಗ್ ಪ್ರಯತ್ನ, ಆಕರ್ಷಕ ಕ್ಯಾಚ್ ಹಾಗೂ ಸಮಗ್ರ ಪ್ರದರ್ಶನವು ಗಮನಾರ್ಹವಾಗಿತ್ತು.

ಸರಣಿಯು ಈಗ ಭಾರತದ ಪರವಾಗಿದ್ದು, ಟೀಮ್ ಇಂಡಿಯಾವು ಆಸ್ಟ್ರೇಲಿಯದ ವಿರುದ್ಧ ಸ್ವದೇಶದಲ್ಲಿ ಐತಿಹಾಸಿಕ ಸರಣಿ ಗೆಲ್ಲಲು ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ. ಮತ್ತೊಂದೆಡೆ ಆಸ್ಟ್ರೇಲಿಯ ತಂಡ 2ನೇ ಪಂದ್ಯದಲ್ಲಿ ತಿರುಗೇಟು ನೀಡಲು ಬಯಸಿದ್ದು ಲೆಜೆಂಡರಿ ಎಲ್ಲಿಸ್ ಪೆರ್ರಿ 300ನೇ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.

ಪಂದ್ಯ ಆರಂಭದ ಸಮಯ: ಸಂಜೆ 7:00

LEAVE A REPLY

Please enter your comment!
Please enter your name here