ಬೆಳಗಾವಿ : ಇಂದಿನಿಂದ(ಡಿಸೆಂಬರ್ 19) ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ(Belagavi Winter Session) ಆರಂಭವಾಗಿದ್ದು,. ಮೊದಲ ದಿನ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯ್ತು. ಇನ್ನು ನಾಳೆ(ಡಿಸೆಂಬರ್ 20) 2ನೇ ದಿನದ ಅಧಿವೇಶನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ (SC ST Reservation hike Bill) ಹಾಗೂ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವಿಧೇಯಕ ಸೇರಿ ಒಟ್ಟು 4 ಮಸೂದೆ ಮಂಡನೆಯಾಗಲಿವೆ.
ಚುನಾವಣೆ ಹೊಸ್ತಿಲಲ್ಲಿ ಇರುವ ಸಂದರ್ಭದಲ್ಲಿ ಆಡಳಿತ ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವೋಟ್ ಬ್ಯಾಂಕ್ಗೆ ಕೈ ಹಾಕಿದೆ. ಈ ಹಿನ್ನೆಲೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ ಮಂಡನೆಗೆ ಮುಂದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಶೇ 6ರಷ್ಟು ಹೆಚ್ಚಿಸುವ ನಿರ್ಧಾರವನ್ನು ಸುಗ್ರೀವಾಜ್ಜ್ಞ ಮೂಲಕ ಜಾರಿಗೆ ತರಲು ಈ ಹಿಂದಿನ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿತ್ತು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ನೇತೃತ್ವದ ಆಯೋಗ ಮತ್ತು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಬಿ. ನೇತೃತ್ವದ ಸಮಿತಿಯು ಸಲ್ಲಿಸಿರುವ ವರದಿಯ ಶಿಫಾರಸು ಆಧರಿಸಿ ಪರಿಶಿಷ್ಟ ಜಾತಿಯ ಮೀಸಲಾತಿ ಶೇ.15 ರಿಂದ 17ಕ್ಕೆ ಮತ್ತು ಪರಿಶಿಷ್ಟ ಪಂಡಗಳ ಮೀಸಲಾತಿ ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲು ಈ ಹಿಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದಕ್ಕೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ವಪಕ್ಷಗಳ ಸಭೆ ಕರೆದು ಸರ್ವಾನುಮತದಿಂದ ನಿರ್ಧಾರವನ್ನು ಪ್ರಕಟಿಸಿದ್ದರು.
ನಾಗಮೋಹನ್ ದಾಸ್ ಹೇಳಿದಂತೆ ಹೆಜ್ಜೆ ಇಟ್ಟ ಸರ್ಕಾರ
ಕೇವಲ ಸರ್ಕಾರಿ ಆದೇಶದ ಮೂಲಕ ಮೀಸಲಾತಿ ಹೆಚ್ಚಿಸಿದರೆ ನ್ಯಾಯಾಲಯದಲ್ಲಿ ಹಿನ್ನಡೆಯಾಗಬಹುದು. ಇದಕ್ಕಾಗಿ ಮಸೂದೆಯೊಂದನ್ನು ರೂಪಿಸಿ, ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕು. ಬಳಿಕ ಸುಗ್ರೀವಾಜ್ಞೆ ಮೂಲಕ ಅದನ್ನು ಜಾರಿಗೊಳಿಸಬೇಕು. ಆರು ತಿಂಗಳೊಳಗೆ ತಿದ್ದುಪಡಿ ಮಸೂದೆಗೆ ವಿಧಾನ ಮಂಡಲದ ಒಪ್ಪಿಗೆ ಪಡೆಯಬೇಕು. ನಂತರ ಸಂವಿಧಾನದ ಒಂಭತ್ತನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು ಎಂಬ ಸಲಹೆಯನ್ನು ನಾಗಮೋಹನ್ ದಾಸ್ ಅವರು ವರದಿ ನೀಡಿದ್ದರು. ಅದರ ಅನ್ವಯ ನಾಳಿನ ಅಧಿವೇಶನದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದ ಮೀಸಲಾತಿ ಹೆಚ್ಚಳ ವಿಧೇಯಕ ಮಂಡನೆ ಮಾಡಲಾಗುತ್ತಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ.50 ರಷ್ಟನ್ನು ಮೀರುವಂತಿಲ್ಲ. ಅಸಾಧಾರಣ, ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಶೇ. 50 ಮೀಸಲಾತಿ ಮೀರಬಹುದು ಎಂದು 1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿದ್ದು, ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಸರ್ಕಾರದ ಮುಂದಿರುವ ಒಂದು ದಾರಿ ಅಂದ್ರೆ ಅದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಶೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಷ್ಟೇ.
ಎಸ್‌ಸಿ, ಎಸ್‌ಟಿ ಸಮುದಾಯಗಳ ಮತಗಳನ್ನು ಸೆಳೆಯುವ ಪ್ಲ್ಯಾನ್
ಈಗ ಎಸ್ ಟಿಗೆ 4%, ಎಸ್‌ಸಿ 2% ಮೀಸಲಾತಿ ಹೆಚ್ಚಳ ಮಾಡಿದ್ದರಿಂದ ಒಟ್ಟು ಮೀಸಲಾತಿ ಪ್ರಮಾಣ 56% ಏರಿಕೆಯಾಗಲಿದೆ. ಮೀಸಲಾತಿ ಹೆಚ್ಚಳದಿಂದ ಎಸ್‌ಟಿ ಸಮುದಾಯಕ್ಕೆ 7%, ಎಸ್ ಸಿ ಸಮುದಾಯಕ್ಕೆ 17% ಮೀಸಲಾತಿ ದಕ್ಕಲಿದೆ. ಸುಪ್ರೀಂ ಆದೇಶದ ಪ್ರಕಾರ ಮೀಸಲಾತಿ ಶೇ 50 ದಾಟಬಾರದು ಅಂತಿದೆ. ಆದ್ರೆ, ತಮಿಳುನಾಡು ಒಂಭತ್ತನೇ ಪರಿಚ್ಛೇದ ಅಡಿಯಲ್ಲಿ ಶೇ. 69ರಷ್ಟು ಮೀಸಲಾತಿ ನೀಡಿದೆ. ಇದರಿಂದ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ. ಅದೇ ರೀತಿ ಕರ್ನಾಟಕದಲ್ಲೂ ಮಾಡಲು ಬಿಜೆಪಿ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಗಳ ಮತಗಳನ್ನು ಸೆಳೆಯುವ ಪ್ಲ್ಯಾನ್ ಮಾಡಿದೆ.
ತಮಿಳುನಾಡು ಸರ್ಕಾರದಿಂದ ಶೇ.69 ಮೀಸಲಾತಿ
ಮರಾಠ ಸಮುದಾಯಕ್ಕೆ ಮಹಾ ಸರ್ಕಾರ ನೀಡಿದ್ದ ಮೀಸಲಾತಿಯನ್ನು ರದ್ದು ಮಾಡಿದ್ದ ಸುಪ್ರೀಂ ಕೋರ್ಟ್ , ತಮಿಳುನಾಡು ಸರ್ಕಾರ ಶೇ.69 ಮೀಸಲಾತಿ ನೀಡಿತ್ತು. ಹಿಂದು ವರ್ಗಗಳಿಗೆ ಶೇ.26.5, ಅತಿ ಹಿಂದುಳಿದ ವರ್ಗಗಳಿಗೆ ಶೇ.20, ಹಿಂದುಳಿದ ಮುಸಲ್ಮಾನರಿಗೆ ಶೇ.3.5. ಪರಿಶಿಷ್ಟ ಜಾತಿಗೆ ಶೇ.18 ಪರಿಶಿಷ್ಟ ಪಂಗಡಕ್ಕೆ ಶೇ.1 ರಷ್ಟು ಮೀಸಲಾತಿ ನೀಡಿತ್ತು. 1993ರಲ್ಲಿ ವಿಶೇಷ ಅಧಿವೇಶನ ಕರೆದು ಕಾಯ್ದೆ ರೂಪಿಸಿದ್ದ ಜಯಲಲಿತಾ ಸರ್ಕಾರ, ಶೇ.69 ರಷ್ಟು ಮೀಸಲಾತಿ ಕಾಯ್ದೆಗೆ ರಾಷ್ಟ್ರಪತಿಗಳಿಂದ ಅಂಕಿತ ಹಾಕಿಸಿತ್ತು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಿತ್ತು. ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಿದರೆ ಕೋರ್ಟ್ ಹಸ್ತಕ್ಷೇಪ ಮಾಡುವಂತಿಲ್ಲ. ಆದರೆ ತಮಿಳುನಾಡು ಸರ್ಕಾರದ ಮೀಸಲಾತಿ ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣ ಬಾಕಿಯಿದೆ.