ಮಂಗಳೂರು, ಜ.3: ನಾಲ್ಕೈದು ವರ್ಷಗಳಿಂದ ಬಿಲ್ ಬಾರದೆ ಒಂದೇ ಬಾರಿಗೆ ಸಾವಿರಾರು ಮೊತ್ತದ ಬಿಲ್, ಮೀಟರ್ ದುರಸ್ತಿ ಪಡಿಸಿದರೂ ಅಸರ್ಮಪಕ ಬಿಲ್, ಲಕ್ಷಾಂತರ ರೂ. ಬಾಕಿಯ ಬಿಲ್ ಹೀಗೆ ನಾನಾ ರೀತಿಯ ಸಮಸ್ಯೆಗಳ ದೂರು ಅರ್ಜಿಗಳೊಂದಿಗೆ ಬುಧವಾರ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸರತಿ ಸಾಲಿನಲ್ಲಿ ಅಹವಾಲು ಸಲ್ಲಿಸುವ ಪ್ರಕ್ರಿಯೆಗೆ ಲಾಲ್‌ಬಾಗ್‌ನ ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಸಾಕ್ಷಿಯಾಯಿತು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಖುದ್ದು ಹಾಜರಿದ್ದು, ಜನರಿಂದ ಅಹವಾಲುಗಳನ್ನು ಸ್ವೀಕರಿಸಿ, ಸ್ಥಳದಲ್ಲೇ ಇತ್ಯರ್ಥಪಡಿಸಲು ಸಾಧ್ಯವಾಗುವ ಪ್ರಕರಣಗಳಿಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಮಾತನಾಡಿದ ಮೇಯರ್ ಸುಧೀರ್ ಶೆಟ್ಟಿ, ಕಳೆದ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರನೇಕರು ನೀರಿನ ಬಿಲ್ ಮನೆಗಳಿಗೆ ಪ್ರತಿ ತಿಂಗಳು ನೀಡಲಾಗುತ್ತಿಲ್ಲ. ನೀಡಿದ ಬಿಲ್‌ನಲ್ಲಿ ನೂರಾರು ಪಟ್ಟು ಹೆಚ್ಚಿನ ಮೊತ್ತ, 12000ಕ್ಕೂ ಅಧಿಕ ಮೀಟರ್‌ಗಳು ಎಂಎನ್‌ಆರ್ (ಮೀಟರ್ ನಾಟ್ ರೀಡಿಂಗ್) ಆಗಿವೆ. ಬಿಲ್‌ಗಳಲ್ಲಿ ಸಾಕಷ್ಟು ಲೋಪದೋಷಗಳು ಇವೆ ಎಂಬುದಾಗಿ ದೂರಿದ್ದರು. ಆ ಸಂದರ್ಭ ನೀರಿನ ಬಿಲ್‌ನ ಪರಿಷ್ಕರಣೆಯ ಸಭೆ ಮಾಡುವುದಾಗಿ ಹೇಳಿದಂತೆ ಪತ್ರಿಕಾ ಪ್ರಕಟನೆಯ ಮೂಲಕ ಸಮಸ್ಯೆ ಇರುವವರು ಅಹವಾಲು ಸಲ್ಲಿಸಲು ತಿಳಿಸಲಾಗಿತ್ತು. ದೂರುಗಳನ್ನು ಪರಿಶೀಲಿಸಿ ಸ್ಥಳದಲ್ಲಿಯೇ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಪ್ರಥಮ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ. ತಂತ್ರಾಂಶದಲ್ಲಿನ ದೋಷದಿಂದ ಅಧಿಕ ಮೊತ್ತದ ಬಿಲ್‌ಗಳನ್ನು ಸ್ಥಳದಲ್ಲಿಯೇ ಪರಿಷ್ಕರಿಸುವ ಕಾರ್ಯ ನಡೆಯುತ್ತಿದೆ. ಮುಂದಿನ ಬುಧವಾರ ಸುರತ್ಕಲ್ ವಲಯ ಕಚೇರಿಯಲ್ಲಿ ಈ ಅಹವಾಲು ಸ್ವೀಕಾರ ನಡೆಯಲಿದೆ. ಮಾತ್ರವಲ್ಲದೆ ಈ ಕಾರ್ಯ ಮುಂದಿನ ಎರಡು ತಿಂಗಳಿಗೊಮ್ಮೆ ನಡೆಸಲಾಗುವುದು ಎಂದರು.
ಉಪ ಮೇಯರ್ ಸುನೀತಾ, ಕಾರ್ಪೊರೇಟರ್ ಶೈಲೇಶ್, ಸಂಬಂಧಪಟ್ಟ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.