ಬೆಂಗಳೂರು: ರಾಜಕಾಲುವೆಯಲ್ಲಿ ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಿಲ್ಲದಂತೆ ಕಾಲುವೆ ಮೇಲೆ ಸೇತುವೆ ನಿರ್ಮಾಣ ಮಾಡುವುದು ಒತ್ತುವರಿ ಮಾಡಿದಂತಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಮೆಸೆಸ್ ಜನಾರ್ಧನ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜಕಾಲುವೆಯ ಮೇಲೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸೇತುವೆ ನಿರ್ಮಾಣ ಮಾಡಿ, ರಾಜಕಾಲುವೆ ಒಳಭಾಗದಲ್ಲಿ ಯಾವುದೇ ರೀತಿಯ ನಿರ್ಮಾಣ ಮಾಡದೆ, ನೀರು ಸರಾಗವಾಗಿ ಹರಿಯುವುದಕ್ಕೆ ಅಡ್ಡಿಯಾಗದಂತಿದ್ದರೆ, ಅದು ಒತ್ತುವರಿ ಮಾಡಿದಂತೆ ಆಗುವುದಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಪ್ರಕರಣವೇನು?: ಅರ್ಜಿದಾರರ ಕಂಪೆನಿಗೆ ಬೆಂಗಳೂರು ನಗರ ಜಿಲ್ಲಾ ಆನೇಕಲ್ ತಾಲೂಕು, ಅತ್ತಿಬೆಲೆ ಹೋಬಳಿಯ ಎಂ.ಮೇಡಹಳ್ಳಿ ಗ್ರಾಮದಲ್ಲಿ ಜನಾಧಾರ ಶುಭ್ ಹೆಸರಿನಲ್ಲಿ 1,128 ವಸತಿ ಸಮುಚ್ಚಯ ನೀಡುವುದಕ್ಕಾಗಿ 2013ರ ಜನವರಿಯಲ್ಲಿ ಅನುಮತಿ ಸಿಕ್ಕಿತ್ತು.
2013ರ ಜೂನ್ 5 ರಂದು ಆನೇಕಲ್ ಯೋಜನಾ ಪ್ರಾಧಿಕಾರ ನೀಡಿದ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಂಡಿತ್ತು. ಅಲ್ಲದೆ, ಖರೀದಿದಾರರಿಗೆ ವಸತಿ ಸಮುಚ್ಚಯಗಳನ್ನು ಮಾರಾಟ ಮಾಡಲಾಗಿದ್ದು, ಎಲ್ಲ ರೀತಿಯ ಅನುಮತಿಗಳನ್ನು ಪಡೆದುಕೊಂಡಿದ್ದರು.
ಆದರೆ, ಪಿ.ಎಂ. ಕೃಷ್ಣಪ್ಪ ಎಂಬುವರು ನೀಡಿದ ದೂರಿನ ಅನ್ವಯ 2016ರ ಆಗಸ್ಟ್ 19ರಂದು ಆನೇಕಲ್ ಯೋಜನಾ ಪ್ರಾಧಿಕಾರ ತಹಶೀಲ್ದಾರ್ ಗೆ ಅರ್ಜಿದಾರರ ವಸತಿ ಸಮುಚ್ಚಯದಲ್ಲಿ ರಾಜಕಾಲುವೆ ಸೇತುವೆ ನಿರ್ಮಾಣ ಮಾಡುವ ಮೂಲಕ ಒತ್ತುವರಿ ಮಾಡಲಾಗಿದೆ ಎಂಬುದಾಗಿ ತಿಳಿಸಲಾಗಿತ್ತು. ಪರಿಣಾಮ ತಹಶೀಲ್ದಾರ್ ಅವರು ವಸತಿ ಸಮುಚ್ಚಯದ ಮುಂದೆ ಒತ್ತುವರಿ ಮಾಡಲಾಗಿದೆ ಎಂಬುದಾಗಿ ಫಲಕ ಅಳವಡಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಭೂ ದಾಖಲೆಗಳ ಇಲಾಖೆ ಹೆಚ್ಚುವರಿ ನಿರ್ದೇಶಕರ ಮೂಲಕ ಸರ್ವೇ ಕಾರ್ಯ ನಡೆಸಲಾಗಿದೆ. ಅದರಂತೆ ಗ್ರಾಮದ ನಕ್ಷೆಯಲ್ಲಿ ಇರುವಂತೆ ರಾಜಕಾಲುವೆ ಮೇಲೆ ಯಾವುದೇ ಕಟ್ಟಡ ನಿರ್ಮಾಣ ಮಾಡಿಲ್ಲ ಎಂಬುದಾಗಿ ತಿಳಿಸಲಾಗಿದೆ. ಜೊತೆಗೆ, ವಸತಿ ಸಮುಚ್ಚಯವು ರಾಜಕಾಲುವೆ ಎರಡೂ ಬದಿಗಳಲ್ಲಿದ್ದು, ಅಲ್ಲಿಯ ನಿವಾಸಿಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿಬರುವುದಕ್ಕಾಗಿ ಮೂರು ಕಡೆಗಳಲ್ಲಿ ಸೇತುವೆ ನಿರ್ಮಾಣ ಮಾಡಲಾಗಿದೆ.
ಆದರೆ, ನೀರು ಸರಾಗವಾಗಿ ಹರಿದುಹೋಗಲು ಕಾಂಕ್ರೀಟ್ ಪೈಪ್ ಅಳವಡಿಸಲಾಗಿದ್ದು, ನೀರು ಹರಿಯುವುದಕ್ಕೆ ಯಾವುದೇ ಅಡ್ಡಿಯುಂಟಾಗುವುದಿಲ್ಲ ಎಂದು ಅರ್ಜಿದಾರರು ನ್ಯಾಯಪೀಠಕ್ಕೆ ವಿವರಿಸಿದ್ದರು.
ಸರಕಾರದ ಪರ ವಕೀಲರು, ರಾಜಕಾಲುವೆ ಮೇಲೆ ಯಾವುದೇ ಸೇತುವೆ ನಿರ್ಮಾಣ ಮಾಡಿಲ್ಲ. ಆದರೆ, ವಸತಿ ಸಮುಚ್ಚಯದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಜನ ಹೋಗಿ ಬರಲು ಸೇತುವೆ ನಿರ್ಮಾಣ ಮಾಡಿದ್ದಾರೆ. ಇದರಿಂದ ನೀರು ಸರಾಗವಾಗಿ ಹರಿಯಲು ಯಾವುದೇ ಅಡ್ಡಿಯಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದರು.
