ಬೆಂಗಳೂರು: ಇತ್ತೀಚೆಗೆ ಹತ್ಯೆಯಾದ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ತಂದೆ ನಿರಂಜನ ಹಿರೇಮಠ ಅವರಿಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರವಿವಾರ ದೂರವಾಣಿ ಕರೆ ಮಾಡಿ ಸಾಂತ್ವನ ಹೇಳಿದರು.
ಈ ಘಟನೆಯಿಂದ ನಮಗೂ ಆಘಾತವಾಗಿದೆ. ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಆಗಿರುವ ದುಃಖದಲ್ಲಿ ನಾವೂ ಭಾಗಿ. ರಾಜ್ಯ ಸರಕಾರ ನಿಮ್ಮ ಜತೆಗಿದೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ. ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಸಹೋದರ ಡಿ.ಕೆ.ಸುರೇಶ್ ಪರ ಪ್ರಚಾರದ ಸಂದರ್ಭದಲ್ಲಿ ದೂರವಾಣಿ ಕರೆ ಮಾಡಿದರು. ಪೂರ್ವ ನಿಗದಿ ಪ್ರಚಾರ ಕಾರ್ಯದಲ್ಲಿ ನಿರತನಾಗಿದ್ದ ಕಾರಣ ಹುಬ್ಬಳ್ಳಿಗೆ ಖುದ್ದು ಬರಲು ಆಗಲಿಲ್ಲ. ಚುನಾವಣೆ ಮುಗಿದ ನಂತರ ಖಂಡಿತವಾಗಿಯೂ ಬರುತ್ತೇನೆ ಎಂದು ಹೇಳಿದರು ಎಂದು ತಿಳಿದು ಬಂದಿದೆ.