ಪಂಜಾಬ್ ಸರ್ಕಾರವು ಟೋಲ್ ಪ್ಲಾಜಾಗಳನ್ನು ರದ್ದುಪಡಿಸಿರುವ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಟೋಲ್ ಪ್ಲಾಜಾಗಳನ್ನು ರದ್ದುಪಡಿಸಿ ಪ್ರಯಾಣಿಕರಿಗೆ ನೆರವಾಗಬೇಕು ಎಂದು ಆಮ್ ಆದ್ಮಿ ಪಕ್ಷವು ಮಂಗಳವಾರ ಆಗ್ರಹಿಸಿದೆ. ಬೆಂಗಳೂರು: ಪಂಜಾಬ್ ಸರ್ಕಾರವು ಟೋಲ್ ಪ್ಲಾಜಾಗಳನ್ನು ರದ್ದುಪಡಿಸಿರುವ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಟೋಲ್ ಪ್ಲಾಜಾಗಳನ್ನು ರದ್ದುಪಡಿಸಿ ಪ್ರಯಾಣಿಕರಿಗೆ ನೆರವಾಗಬೇಕು ಎಂದು ಆಮ್ ಆದ್ಮಿ ಪಕ್ಷವು ಮಂಗಳವಾರ ಆಗ್ರಹಿಸಿದೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು, ಪಂಜಾಬ್‌ನ ನಮ್ಮ ಪಕ್ಷದ ಸರ್ಕಾರವು ಈವರೆಗೆ ಆ ರಾಜ್ಯದಲ್ಲಿ ಎಂಟು ಟೋಲ್ ಪ್ಲಾಜಾಗಳನ್ನು ರದ್ದುಪಡಿಸಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಪಂಜಾಬ್‌ನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಪ್ರತಿ ಟೋಲ್ ಪ್ಲಾಜಾಗೆ ತೆರಳಿ ಪರಿಶೀಲಿಸುತ್ತಿದ್ದಾರೆ. ಪಿಪಿಪಿ ಮಾದರಿಯ ಅಗ್ರಿಮೆಂಟ್‌ನಲ್ಲಿ ಏನಿದೆ? ಎಷ್ಟುಹಣ ಸಂಗ್ರಹವಾಗಬೇಕಿತ್ತು? ಎಷ್ಟು ಹಣ ಸಂಗ್ರಹವಾಗಿದೆ. ಯಾವ ಟೋಲ್ ಪ್ಲಾಜಾ ಸ್ಥಗಿತಗೊಳಿಬೇಕು ಎಂಬುದು ಸೇರಿದಂತೆ ಎಲ್ಲಾ ಮಾಹಿತಿಗಳನ್ನು ತಿಳಿದು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದರು ಹೇಳಿದರು.
ಪಂಜಾಬ್‌ನಲ್ಲಿ ನಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಎಂಟು ಟೋಲ್ ಪ್ಲಾಜಾಗಳನ್ನು ಸ್ಥಗಿತಗೊಳಿಸಲಾಗಿದೆ. ಆದರೆ, ಕರ್ನಾಟಕದಲ್ಲಿ ಕಮಿಷನ್ ಆಸೆಗಾಗಿ ಅವಧಿ ಮುಗಿದರೂ ಟೋಲ್ ಶುಲ್ಕ ಮುಂದುವರೆಸಲು ಅವಕಾಶ ನೀಡಲಾಗಿದೆ. 20 ವರ್ಷದ ಗುತ್ತಿಗೆ ಅವಧಿ ಮುಗಿದಿದ್ದರೂ ತುಮಕೂರು ಟೋಲ್ ಪ್ಲಾಜಾ ಸೇರಿದಂತೆ ಗುತ್ತಿಗೆ ಅವಧಿ ಮುಗಿದಿರುವ ರಾಜ್ಯದ ಹಲವು ಟೋಲ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೆಟ್ರೋಲ್ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರಿಗೆ ಟೋಲ್ ಶುಲ್ಕ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿಯು ದಶಪಥವಲ್ಲ, ಆರು ಪಥವೆಂದು ನಾವು ಹೇಳಿದ್ದೆವು. ನಂತರ ಸರ್ಕಾರ ಕೂಡ ಇದನ್ನು ಒಪ್ಪಿಕೊಂಡಿದೆ. ಆ ಹೆದ್ದಾರಿಯನ್ನು 2 ಪಥದಿಂದ 4 ಪಥ ಮಾಡುವಾಗ ಟೋಲ್ ವಿಧಿಸಿರಲಿಲ್ಲ. ಅದೇ ರೀತಿ ಈಗ 4 ಪಥದಿಂದ 6 ಪಥ ಮಾಡುವುದಾಗಲೂ ಟೋಲ್ ವಿಧಿಸದೇ ಜನಸಾಮಾನ್ಯರಿಗೆ ನೆರವಾಗಬೇಕಿತ್ತು. ಉಚಿತವಾಗಿ ರಸ್ತೆ ನೀಡಿ ಸರ್ಕಾರ ಜಂಭದಿಂದ ಪ್ರಚಾರ ಪಡೆದಿದ್ದರೆ, ಅದಕ್ಕೊಂದು ಅರ್ಥವಿರುತ್ತಿತ್ತು. ದೆಹಲಿಯ ಆಮ್ ಆದ್ಮಿ ಪಾರ್ಟಿಯು ಸರ್ಕಾರಿ ಶಾಲೆಗಳಲ್ಲಿ ಈಜುಕೊಳ ತೆರೆದರೆ, ಬಿಜೆಪಿ ಸರ್ಕಾರಗಳು ತೆರೆದ ರಸ್ತೆಗಳಲ್ಲಿ ಈಜುಕೊಳಗಳು ತನ್ನಿಂತಾನೇ ಸೃಷ್ಟಿಯಾಗಿವೆ ಎಂದು ವ್ಯಂಗ್ಯವಾಡಿದರು.