Home ಕರ್ನಾಟಕ ಪಕ್ಷ ತೀರ್ಮಾನಿಸಿದರೆ ಚನ್ನಪಟ್ಟಣದಲ್ಲಿ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ : ಡಿ.ಕೆ. ಶಿವಕುಮಾರ್

ಪಕ್ಷ ತೀರ್ಮಾನಿಸಿದರೆ ಚನ್ನಪಟ್ಟಣದಲ್ಲಿ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ : ಡಿ.ಕೆ. ಶಿವಕುಮಾರ್

34
0

ಬೆಂಗಳೂರು : “ಉಪಚುನಾವಣೆಯಲ್ಲಿ ಚನ್ನಪಟ್ಟಣದ ಜನ ನನ್ನ ಮೇಲೆ ಒಲವು ತೋರಿದರೆ, ಪಕ್ಷ ತೀರ್ಮಾನಿಸಿದರೆ ನಾನು ಸ್ಪರ್ಧೆ ಮಾಡದೇ ಬೇರೆ ವಿಧಿ ಇಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚನ್ನಪಟ್ಟಣ ಪ್ರವಾಸಕ್ಕೂ ಮುನ್ನ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ಚನ್ನಪಟ್ಟಣ ನನ್ನ ಹೃದಯದಲ್ಲಿದೆ. ಇದು ಈ ಹಿಂದೆ ಸಾತನೂರು ವಿಧಾನಸಭಾ ಕ್ಷೇತ್ರದ ಭಾಗವಾಗಿತ್ತು. ಆ ಮೂಲಕ ಈ ಭಾಗ ನನಗೆ ರಾಜಕೀಯವಾಗಿ ಜನ್ಮ ನೀಡಿದ ಸ್ಥಳ. ಈ ಭಾಗದ ಜನ ಕಷ್ಟಕಾಲದಲ್ಲಿ ನಮಗೆ ಹೆಚ್ಚಿನ ಮತ ನೀಡಿ ಬೆಂಬಲ ನೀಡಿದ್ದಾರೆ. ನಾನು ಅವರ ಋಣ ತೀರಿಸಬೇಕು. ಕನಕಪುರ ಯಾವ ರೀತಿ ಅಭಿವೃದ್ಧಿ ಮಾಡಿದ್ದೇನೋ ಅದಕ್ಕಿಂತ ಹೆಚ್ಚಿನ ಅಭಿವೃದ್ಧಿಗೆ ಅವಕಾಶವಿದೆ. ಹೀಗಾಗಿ ಈ ಕ್ಷೇತ್ರದ ಮೇಲೆ ನನಗೆ ವಿಶೇಷವಾದ ಕಾಳಜಿ ಇದೆ. ಚನ್ನಪಟ್ಟಣ ಅಭಿವೃದ್ಧಿ ಹಾಗು ಬದಲಾವಣೆಗೆ ನಾನು ಬದ್ಧವಾಗಿದ್ದೇನೆ. ಹೀಗಾಗಿ ಇಂದು ಅಲ್ಲಿನ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಮತದಾರರು ಹಾಗು ನಾಯಕರ ಜತೆ ಮಾತನಾಡುತ್ತೇನೆ. ಅಲ್ಲಿನ ಜನ ಏನು ಹೇಳುತ್ತಾರೆ ಎಂದು ತಿಳಿದು ನಂತರ ತೀರ್ಮಾನ ಮಾಡುತ್ತೇನೆ” ಎಂದು ತಿಳಿಸಿದರು.

ಚನ್ನಪಟ್ಟಣದಲ್ಲಿ ಸಹೋದರ ಸುರೇಶ್ ಅವರ ಸ್ಪರ್ಧೆ ಬಗ್ಗೆ ಕೇಳಿದಾಗ, “ಈ ವಿಚಾರವಾಗಿ ಇನ್ನು ತೀರ್ಮಾನವಾಗಿಲ್ಲ. ನನಗೆ ಮತ ನೀಡಿ ಎಂದು ನಾನು ಅಲ್ಲಿನ ಮತದಾರರಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದರು.

ಅಧಿಕಾರಿಗಳ ಪರಿಶೀಲನೆ ನಂತರ ನೀರಿನ ದರ ಏರಿಕೆ ತೀರ್ಮಾನ:

ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ನೀರಿನ ದರ ಪರಿಷ್ಕರಣೆ ಮಾಡಿಲ್ಲ. ಪರಿಣಾಮ ಜಲ ಮಂಡಳಿ ದೊಡ್ಡ ನಷ್ಟಕ್ಕೆ ಸಿಲುಕಿದೆ. ಬಿಡಬ್ಲ್ಯೂಎಸ್‌ಎಸ್ ಬಿಗೆ ಆರ್ಥಿಕ ನೆರವು ನೀಡಲು ಯಾವುದೇ ಬ್ಯಾಂಕ್ ಗಳು ಮುಂದೆ ಬರುತ್ತಿಲ್ಲ. ಸದ್ಯದಲ್ಲೇ ಕಾವೇರಿ ಐದನೇ ಹಂತದ ಯೋಜನೆ ಪೂರ್ಣಗೊಳ್ಳುತ್ತಿದೆ ಎಂದರು.

ಪ್ರತಿ ವರ್ಷ ನಷ್ಟ ಎದುರಾಗುತ್ತಿರುವುದರಿಂದ ಪರಿಹಾರದ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಶ್ವ ಬ್ಯಾಂಕ್ ಸೇರಿದಂತೆ ಎಲ್ಲಾ ಸಂಸ್ಥೆಗಳು ಮಂಡಳಿ ನಷ್ಟದಿಂದ ಮೇಲೆ ಬರುವ ಪರ್ಯಾಯ ವಿಧಾನವನ್ನು ಕೇಳುತ್ತಿವೆ. ಕಾವೇರಿಯ 6 ಟಿಎಂಸಿ ನೀರನ್ನು ಬೆಂಗಳೂರಿಗೆ ಬಳಸಲು ನಾನು ಆದೇಶ ಹೊರಡಿಸಿದ್ದು, ಮತ್ತೊಂದು ಹಂತದ ಯೋಜನೆ ಅಗತ್ಯವಿದೆ. ಹೀಗಾಗಿ ನೀರಿನ ದರ ಪರಿಷ್ಕರಣೆ ವಿಚಾರವಾಗಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here