ಕೋಲ್ಕತಾ: ರಾಜ್ಯಾದ್ಯಂತ ಎಲ್ಲ ಪಡಿತರ ಅಂಗಡಿಗಳಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಲಾಂಛನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚಿತ್ರಗಳನ್ನು ಒಳಗೊಂಡ ಫಲಕಗಳು ಮತ್ತು ಫ್ಲೆಕ್ಸ್ಗಳನ್ನು ಪ್ರದರ್ಶಿಸುವಂತೆ ಕೇಂದ್ರವು ಪದೇ ಪದೇ ನಿರ್ದೇಶನವನ್ನು ನೀಡಿದ್ದರೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸರಕಾರವು ಈವರೆಗೂ ಅದನ್ನು ಪಾಲಿಸಿಲ್ಲ. ಇದೇ ಕಾರಣದಿಂದ ಕೇಂದ್ರದ ಯೋಜನೆಗಳಡಿ ಭತ್ತ ಖರೀದಿಗಾಗಿ ರಾಜ್ಯ ಸರಕಾರಕ್ಕೆ 7,000 ಕೋಟಿ ರೂ.ಗಳ ಬಿಡುಗಡೆಯನ್ನು ಮೋದಿ ಸರಕಾರವು ತಡೆಹಿಡಿದಿದೆ ಎಂದು newindianexpress.com ವರದಿ ಮಾಡಿದೆ.
ಈ ಹಣವನ್ನು ಬಿಡುಗಡೆಗೊಳಿಸಲು ಕೇಂದ್ರದ ನಿರಾಕರಣೆಯು ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯದಿಂದ ಭತ್ತ ಸಂಗ್ರಹಣೆಯ ಮೇಲೆ ಗಂಭೀರ ಪರಿಣಾಮವನ್ನು ಬೀರಬಹುದು ಎಂದು ರಾಜ್ಯ ಸರಕಾರದ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರವು ಈಗಾಗಲೇ ಎನ್ಎಫ್ಎಸ್ಎ ಯೋಜನೆಗಳಿಗಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಸೆಂಟ್ರಲ್ ಪೂಲ್ ಅಥವಾ ಕೇಂದ್ರದ ದಾಸ್ತಾನಿಗಾಗಿ 8.52 ಲಕ್ಷ ಟನ್ ಭತ್ತವನ್ನು ಖರೀದಿಸಿದೆ. ಈ ವರ್ಷ 70 ಲಕ್ಷ ಟನ್ ಖರೀದಿ ಗುರಿಯನ್ನು ಹೊಂದಿರುವ ಅದು ಸೆಂಟ್ರಲ್ ಪೂಲ್ಗಾಗಿ ಪ್ರಮಾಣ ಸೇರಿದಂತೆ 22 ಲಕ್ಷ ಟನ್ ಭತ್ತವನ್ನು ಖರೀದಿಸಿದೆ. ಆದರೆ ಕೇಂದ್ರದ ಪರವಾಗಿ ಖರೀದಿಸಲಾಗಿರುವ ಭತ್ತಕ್ಕೆ ಹಣವನ್ನು ಇನ್ನೂ ರಾಜ್ಯ ಸರಕಾರಕ್ಕೆ ಮರುಪಾವತಿ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಕೇಂದ್ರವು ಹಣ ಬಿಡುಗಡೆಯನ್ನು ತಡೆಹಿಡಿದಿರುವುದು ಪ್ರಸಕ್ತ ಖಾರಿಫ್ ಋತುವಿನಲ್ಲಿ ಭತ್ತ ಖರೀದಿಯ ಮೇಲೆ ತಕ್ಷಣದ ಪರಿಣಾಮವನ್ನು ಬೀರಲಿದೆ ಎಂದು ಅಧಿಕಾರಿಯೋರ್ವರು ಹೇಳಿದರು.
ರಾಜ್ಯ ಸರಕಾರವು ತನ್ನ ವಾರ್ಷಿಕ ಗುರಿ 70 ಲಕ್ಷ ಟನ್ಗಳ ಶೇ. 80ರಷ್ಟನ್ನು ಖಾರಿಫ್ ಋತುವಿನಲಿ ಖರೀದಿಸುವ ಉದ್ದೇಶವನ್ನು ಹೊಂದಿದೆ ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿವೆ.
ಖಾರಿಫ್ ಋತುವಿನ ಖರೀದಿಯು ಫೆಬ್ರವರಿ ಅಂತ್ಯದವರೆಗೆ ಮುಂದುವರಿಯುತ್ತದೆ. ಈ ಅವಧಿಯೊಳಗೆ ರಾಜ್ಯ ಸರಕಾರವು ಸಾಕಷ್ಟು ಹಣವನ್ನು ಸ್ವೀಕರಿಸದಿದ್ದರೆ ಸಂಪೂರ್ಣ ಸಂಗ್ರಹಣೆ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮವುಂಟಾಗಬಹುದು ಎಂದು ಇನ್ನೋರ್ವ ಅಧಿಕಾರಿ ಹೇಳಿದರು.
