ಬೆಂಗಳೂರು: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ಸಂವಿಧಾನದ ಅನುಚ್ಛೇದ 341ಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ಗುರುವಾರ ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪರಿಶಿಷ್ಟ ಜಾತಿಯಲ್ಲಿನ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸಲು ರಾಜ್ಯ ಸರಕಾರಕ್ಕೆ ಯಾವುದೆ ಅಧಿಕಾರ ಇಲ್ಲ. ಕೇಂದ್ರ ಸರಕಾರವು ಸಂವಿಧಾನದ 341ನೆ ವಿಧಿಗೆ ತಿದ್ದುಪಡಿ ತಂದು ಹೊಸದಾಗಿ ಖಂಡ 3 ಅನ್ನು ಸೇರಿಸಿದರೆ ಒಳ ಮೀಸಲಾತಿ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಪರಿಶಿಷ್ಟ ಜಾತಿಗಳಲ್ಲಿ ವರ್ಗೀಕರಣದ ಬಗ್ಗೆ ದಿಲ್ಲಿ ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಉಷಾ ಮೆಹ್ರಾ ಅಧ್ಯಕ್ಷತೆಯಲ್ಲಿ ಕೇಂದ್ರ ಸರಕಾರವು ರಚಿಸಿದ್ದ ರಾಷ್ಟ್ರೀಯ ಆಯೋಗವು ಸಂವಿಧಾನದ ಅನುಚ್ಛೇದ 341ರಲ್ಲಿ ಹೊಸದಾಗಿ ಖಂಡ 3 ಅನ್ನು ಸೇರಿಸುವಂತೆ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು.
ಚುನಾವಣೆಯ ಪ್ರಚಾರದ ವೇಳೆ ಚಿತ್ರದುರ್ಗದಲ್ಲಿ ನಾವು ಆಯೋಜಿಸಿದ್ದ ಎಸ್ಸಿ-ಎಸ್ಟಿ ಸಮಾವೇಶದಲ್ಲಿ ಸದಾಶಿವ ಆಯೋಗದ ವರದಿ ಜಾರಿಗೆ ಬಗ್ಗೆ ಭರವಸೆ ನೀಡಿದ್ದೆವು. ಆದರೆ, ನಮ್ಮ ಸಮಾವೇಶದ ಬಳಿಕ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಅಂದಿನ ಕಾನೂನು ಸಚಿವರ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿ, ಸದಾಶಿವ ಆಯೋಗದ ವರದಿ ಮುಕ್ತಾಯಗೊಳಿಸಿದೆ ಎಂದು ಅವರು ಹೇಳಿದರು.
ಸಂಪುಟ ಉಪ ಸಮಿತಿಯು ಪರಿಶಿಷ್ಟ ಜಾತಿಗಳನ್ನು ನಾಲ್ಕು ಉಪ ಗುಂಪುಗಳಾಗಿ ವರ್ಗೀಕರಿಸಿ ಶೇಕಡವಾರು ಮೀಸಲಾತಿ ನಿಗದಿಪಡಿಸಿದೆ. ಅಲ್ಲದೆ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಭೋವಿ, ಬಂಜಾರ, ಕೊರಮ, ಕೊರಚ ಜಾತಿಗಳನ್ನು ಉಳಿಸಿಕೊಂಡು ಅನುಮೋದನೆ ನೀಡಿದೆ. ಅಲ್ಲದೆ, ಇನ್ನು ಮುಂದೆ ಸದಾಶಿವ ಆಯೋಗದ ವರದಿಯು ಅಪ್ರಸ್ತುತ, ಅದರಿಂದಾಗಿ, ಈ ವರದಿಯು ಮುಕ್ತಾಯಗೊಂಡಿದೆ ಎಂದು ಕಳೆದ ಸಾಲಿನ ಮಾರ್ಚ್‍ನಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯವನ್ನು ಕೈಗೊಂಡಿದೆ ಎಂದು ಮಹದೇವಪ್ಪ ತಿಳಿಸಿದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಇಂದಿನ ಸಚಿವ ಸಂಪುಟ ಸಭೆಯಲ್ಲಿ ವಿವರವಾಗಿ ಚರ್ಚೆ ನಡೆಸಿದ್ದೇವೆ. ಪರಿಶಿಷ್ಟ ಜಾತಿಯಲ್ಲಿ ಉಪ ಗುಂಪುಗಳ ವರ್ಗೀಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಸರಕಾರ ರೂಪಿಸಿದ್ದ ಕಾಯ್ದೆಯನ್ನು ಪಂಜಾಬ್-ಹರಿಯಾಣ ಹೈಕೋರ್ಟ್ ರದ್ದುಪಡಿಸಿದೆ. ಅದನ್ನು ಪ್ರಶ್ನಿಸಿ ಪಂಜಾಬ್ ಸರಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್‍ನ ಐವರು ನ್ಯಾಯಮೂರ್ತಿಗಳ ಪೀಠವು ಈ ಪ್ರಕರಣವನ್ನು ಏಳು ನ್ಯಾಯಮೂರ್ತಿಗಳ ಪೀಠದ ಎದುರು ತರುವಂತೆ ತಿಳಿಸಿದೆ. ಆದುದರಿಂದ, ಪರಿಶಿಷ್ಟ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಡಬೇಕು, ಯಾರಿಗೂ ಅನ್ಯಾಯ ಆಗಬಾರದು ಎಂದು ಒಳಮೀಸಲಾತಿಗೆ ಸಾಂವಿಧಾನಿಕ ರಕ್ಷಣೆ ಪಡೆಯಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ್ದೇವೆ ಎಂದು ಮಹದೇವಪ್ಪ ತಿಳಿಸಿದರು.