ನವದೆಹಲಿ: ದೆಹಲಿಯಿಂದ ಮ್ಯಾಂಚೆಸ್ಟರ್ಗೆ ಹೋಗುತ್ತಿದ್ದ ಇಂಡಿಗೋ ವಿಮಾನವು ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಆಫ್ರಿಕಾದ ಮೇಲೆ ಸುಮಾರು ಎಂಟು ಗಂಟೆಗಳ ಕಾಲ ಹಾರಾಟ ನಡೆಸಿದ ನಂತರ ವಾಪಸ್ ದೆಹಲಿ ಬಂದಿದೆ.
ಕೊನೆ ಕ್ಷಣದ ವಾಯುಪ್ರದೇಶ ನಿರ್ಬಂಧಗಳಿಂದಾಗಿ ದೆಹಲಿ – ಮ್ಯಾಂಚೆಸ್ಟರ್ ವಿಮಾನ ತನ್ನ ಮೂಲ ಸ್ಥಳಕ್ಕೆ ಮರಳಬೇಕಾಯಿತು ಎಂದು ಇಂಡಿಗೋ ತಿಳಿಸಿದೆ.
6E 033 ವಿಮಾನವು ಸೋಮವಾರ(ಮಾರ್ಚ್ 9, 2026) ಬೆಳಗಿನ ಜಾವ 12.30 ಕ್ಕೆ ದೆಹಲಿಯಿಂದ ಹೊರಟಿತು. ಈ ವಿಮಾನವು ಸಂಘರ್ಷ ಪೀಡಿತ ಪರ್ಷಿಯನ್ ಕೊಲ್ಲಿ ಪ್ರದೇಶವನ್ನು ಸಂಪೂರ್ಣವಾಗಿ ತಪ್ಪಿಸಿ, ಆಫ್ರಿಕಾದ ಮೇಲೆ ಹಾರುತ್ತಿತ್ತು. ಅದು ಇಥಿಯೋಪಿಯಾ ಮೂಲಕ ಖಂಡವನ್ನು ಪ್ರವೇಶಿಸಿತು ಮತ್ತು ಎರಿಟ್ರಿಯಾದ ಮೇಲೆ ಹಾರುತ್ತಿದ್ದಾಗ ಯು-ಟರ್ನ್ ತೆಗೆದುಕೊಂಡು ದೆಹಲಿಗೆ ಹಿಂತಿರುಗಲು ಪ್ರಾರಂಭಿಸಿತು, ಅಂತಿಮವಾಗಿ ಮಧ್ಯಾಹ್ನ 2.30 ರ ಸುಮಾರಿಗೆ ದೆಹಲಿಯಲ್ಲಿ ಲ್ಯಾಂಡ್ ಆಗಿದೆ.
ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ “ಕೊನೆಯ ಕ್ಷಣದ ವಾಯುಪ್ರದೇಶದ ನಿರ್ಬಂಧಗಳಿಂದಾಗಿ” ವಿಮಾನ ಹಿಂತಿರುಗಬೇಕಾಯಿತು ಎಂದು ಇಂಡಿಗೋ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಯಾಣವನ್ನು ಪುನರಾರಂಭಿಸುವ ಸಾಧ್ಯತೆಯನ್ನು ನಿರ್ಣಯಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
