ಮಂಗಳೂರು, ಜ.1: ಪಶ್ಚಿಮ ವಲಯ ಡಿಐಜಿಯಾಗಿ ಅಮಿತ್ ಸಿಂಗ್ ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಡ್ರಗ್ಸ್, ಕೋಮುವಾದ ಸಹಿತ ಕಾನೂನು ಬಾಹಿರ ಕೃತ್ಯಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ವಹಿಸಲಾಗುವುದು. ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದರು.
‘ಸೆಂಟ್ರಲ್ ಕ್ರೇಡರ್‌ನಲ್ಲಿ ಕೆಲಸ ಮಾಡುವ ಅನುಭವ ವಿಭಿನ್ನವಾಗಿದ್ದು, ಇದೀಗ ಮತ್ತೆ ಮರಳಿ ಈ ಹುದ್ದೆಗೆ ಬಂದಿರುವುದು ಮರಳಿ ತವರಿಗೆ ಬಂದ ಅನುಭವ. ಮಂಗಳೂರಿಗೆ ಹೋಲಿಸಿದರೆ, 10 ವರ್ಷಗಳ ಹಿಂದಿನ ಅನುಭವಕ್ಕೂ ಈಗ ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಅಪರಾಧ ಪ್ರಕರಣಗಳೂ ಸಾಕಷ್ಟು ಬದಲಾಗಿದ್ದು, ಇಂದು ಕಳ್ಳತನ ಸೈಬರ್ ಕ್ರೈನಂತಹ ವೈಟ್ ಕಾಲರ್ ಅಪರಾಧಗಳು ಹೆಚ್ಚಿವೆ. ಇಲ್ಲಿನ ಎಸ್‌ಪಿ, ಇನ್ಸ್‌ಪೆಕ್ಟರ್ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಡ್ರಗ್ಸ್ ಹಾವಳಿ ಇದೆ. ಮುಖ್ಯವಾಗಿ ನಗರ ಭಾಗದಲ್ಲಿ ಡ್ರಗ್ಸ್ ದೊಡ್ಡ ಸಮಸ್ಯೆಯಾಗುತ್ತಿದೆ. ಡ್ರಗ್ಸ್ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ. ಇದರ ಬಗ್ಗೆ ಜಾಗೃತವಾಗಿದ್ದು ಕ್ರಮ ವಹಿಸಲಾಗುವುದು ಎಂದರು. ಕೋಮವಾದಕ್ಕೆ ಸಂಬಂಧಿಸಿದ ಘಟನೆಗಳ ನಿಯಂತ್ರಣಕ್ಕೆ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ. ಅನೈತಿಕ ಪೊಲೀಸ್‌ಗಿರಿ ವಿರುದ್ಧವೂ ಕಾನೂನು ಪ್ರಕಾರ ಕೈಗೊಳ್ಳಲಾಗುತ್ತದೆ. ನಾನು ಎಎಸ್‌ಪಿಯಾಗಿದ್ದಾಗಲೂ ಅನೈತಿಕ ಪೊಲೀಸ್‌ಗಿರಿಯ ಘಟನೆಗಳಿದ್ದವು ಎಂದವರು ಹೇಳಿದರು.
ಸೈಬರ್ ಕ್ರೈಂಗಳು ಹೆಚ್ಚುತ್ತಿರುವ ಬಗ್ಗೆ ಜನರು ಕೂಡ ಜಾಗೃತರಾಗಿರಬೇಕು. ಇಂಟೆಲಿಜೆನ್ಸಿ ವಿಭಾಗವನ್ನು ಅಲರ್ಟ್ ಆಗಿಸಿ ಯಾವುದೇ ಕೋಮು ಸಂಬಂಧಿ ಘಟನೆಗಳನ್ನು ನಿಯಂತ್ರಿಸಲಾಗುವುದು. ತಲೆಮರೆಸಿಕೊಂಡಿರುವವರ ಪತ್ತೆಗೆ ಕೂಡ ಗಮನ ಹರಿಸಲಾಗುವುದು ಎಂದು ಅವರು ಹೇಳಿದರು.
ಈ ಮೊದಲು ಪಶ್ಚಿಮ ವಲಯ ಡಿಐಜಿಯಾಗಿದ್ದ ಚಂದ್ರಗುಪ್ತ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್ ಕುಮಾರ್ ಉಪಸ್ಥಿತರಿದ್ದರು.
2007 ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿರುವ ಅಮಿತ್ ಸಿಂಗ್, 2009ರಿಂದ 2011ರಲ್ಲಿ ಎಎಸ್ಪಿಯಾಗಿ ಮಂಗಳೂರು, ಪುತ್ತೂರಿನಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. 2011ರಿಂದ ಹಾಸನ ಎಸ್ಪಿಯಾಗಿ, ಗುಲ್ಬರ್ಗ, ಬೆಂಗಳೂರು ಗ್ರಾಮಾಂತರದಲ್ಲಿ ಎಸ್ಪಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮಾತ್ರವಲ್ಲದೆ ನಾಲ್ಕು ವರ್ಷ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಯಲ್ಲಿ ಕೆಲಸ ನಿರ್ವಹಿಸಿದ್ದಾರೆ.