ಲಾಹೋರ್: ಪಾಕಿಸ್ತಾನದ ಪ್ರಕ್ಷುಬ್ಧ ನೈಋತ್ಯ ಪ್ರಾಂತ ಬಲೂಚಿಸ್ತಾನದಲ್ಲಿ ಗುರುವಾರ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು ಇತರ 4 ಮಂದಿ ಗಾಯಗೊಂಡಿರುವುದಾಗಿ `ಜಿಯೊ ನ್ಯೂಸ್’ ವರದಿ ಮಾಡಿದೆ.
ಪ್ರಾಂತೀಯ ರಾಜಧಾನಿ ಕ್ವೆಟಾದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಮೃತಪಟ್ಟಿದ್ದು ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದೆ. ಪೊಲೀಸರು ಈ ಪ್ರದೇಶದಲ್ಲಿ ನಾಕಾಬಂದಿ ನಡೆಸಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ನಸೀರಾಬಾದ್ ಮತ್ತು ಟರ್ಬಟ್ ನಗರಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಗ್ರೆನೇಡ್ ಸ್ಫೋಟಗೊಂಡು ಕನಿಷ್ಟ 4 ಮಂದಿ ಗಾಯಗೊಂಡಿದ್ದಾರೆ. ಸೋಮವಾರ ಬಲೂಚಿಸ್ತಾನದ ಬಿಗಿ ಭದ್ರತೆಯ ಮ್ಯಾಕ್ ಜೈಲಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭದ್ರತಾ ಪಡೆ ನಡೆಸಿರುವ ಕಾರ್ಯಾಚರಣೆಯಲ್ಲಿ ಗುರುವಾರದ ವರೆಗೆ ಕನಿಷ್ಟ 21 ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭದ್ರತಾ ಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ, ಫೆಬ್ರವರಿ 8ರಂದು ದೇಶದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆಯಲ್ಲಿ , ಬಲೂಚಿಸ್ತಾನ ಮತ್ತು ಖೈಬರ್ ಪಖ್ತೂಂಕ್ವಾದಲ್ಲಿ ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಚರ್ಚೆ ನಡೆಸಲು ಗುರುವಾರ ಪಾಕಿಸ್ತಾನದ ಚುನಾವಣಾ ಆಯೋಗ ಉನ್ನತ ಮಟ್ಟದ ಸಭೆ ನಡೆಸಿದೆ.