Home ಕರ್ನಾಟಕ ಪಾಕ್ ಪರ ಘೋಷಣೆ ಕೂಗುವವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ: ಜೆ.ಪಿ.ನಡ್ಡಾ

ಪಾಕ್ ಪರ ಘೋಷಣೆ ಕೂಗುವವರನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ: ಜೆ.ಪಿ.ನಡ್ಡಾ

20
0

ಬೆಳಗಾವಿ: ಪಾಕಿಸ್ತಾನ ಝಿಂದಾಬಾದ್ ಘೋಷಣೆ ಕೂಗುವ ರಾಜ್ಯಸಭಾ ಸದಸ್ಯರಿರುವ ಕಾಂಗ್ರೆಸ್ ಪಕ್ಷದವರನ್ನು ರಾಜ್ಯದ ಜನತೆ ಬೆಂಬಲಿಸುವುದಿಲ್ಲ. ನಮ್ಮ ಸರಕಾರ ಇದ್ದಾಗ ಇಲ್ಲಿ ಶಾಂತ ಪರಿಸ್ಥಿತಿ ನೆಲೆಸಿತ್ತು. ಈಗ ಬಾಂಬ್ ಸ್ಫೋಟಿಸುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದರು.

ಮಂಗಳವಾರ ಚಿಕ್ಕೋಡಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಬೂತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಸೇರಿದಂತೆ ವಿವಿಧ ಭರವಸೆಗಳನ್ನು ಈಡೇರಿಸಿ ಬಿಜೆಪಿ ನುಡಿದಂತೆ ನಡೆದಿದೆ. ದೂರದೃಷ್ಟಿಯಿರುವ ಬಿಜೆಪಿಯನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದರು.

ಬಡವರು, ಮಹಿಳೆಯರು, ರೈತರು, ಯುವಜನತೆಯ ಆಶಯಗಳನ್ನು ಈಡೇರಿಸಿದ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನಾವು ಹೇಳಿದ್ದೆವು. ತ್ರಿವಳಿ ತಲಾಖ್ ಪದ್ಧತಿಯನ್ನು ನಾವು ರದ್ದು ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಕಾರಣಕ್ಕಾಗಿ ಈ ಕಡೆ ಗಮನ ಹರಿಸಿರಲಿಲ್ಲ ಎಂದು ಅವರು ಟೀಕಿಸಿದರು.

ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ನಮ್ಮದು. ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ 303 ಸಂಸದರು ನಮ್ಮ ಪಕ್ಷದವರು ಲೋಕಸಭೆಯಲ್ಲಿದ್ದಾರೆ. ಯುವಜನರಿಗೆ ತರಬೇತಿ ನೀಡಿ ಪ್ರಧಾನಿ ಮೋದಿ ಆತ್ಮನಿರ್ಭರರನ್ನಾಗಿ ಮಾಡಿದ್ದಾರೆ. ವಿಕಸಿತ ಭಾರತ ಸಂಕಲ್ಪದಲ್ಲಿ ತಮ್ಮನ್ನು ತೊಡಗಿಕೊಳ್ಳುವಂತೆ ಮೋದಿ ಅವರು ಯುವಜನರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದು ನಡ್ಡಾ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಲೋಕಸಭಾ ಚುನಾವಣೆಗೆ ಕೇವಲ 50-60 ದಿನಗಳು ಮಾತ್ರ ಬಾಕಿ ಇದೆ. ಬಿಜೆಪಿ-ಜೆಡಿಎಸ್ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲು ಶಪಥ ಮಾಡಿ ಹೊರಟಿದ್ದೇನೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಬೇಕು. ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ ಎಂದರು.

ರಾಜ್ಯಸಭಾ ಚುನಾವಣೆಯ ಬಳಿಕ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದ್ದಾರೆ. ಬಿಜೆಪಿ ಹೋರಾಟದ ಬಳಿಕ ನಿನ್ನೆ ಮೂವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗೆ ಕಿಂಚಿತ್ತಾದರೂ ದೇಶಪ್ರೇಮ ಇದ್ದರೆ ಪಾಕಿಸ್ತಾನ್ ಝಿಂದಾಬಾದ್ ಘೋಷಣೆ ಕೂಗಿದವರಿಗೆ ಶಕ್ತಿ ನೀಡಿದ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

LEAVE A REPLY

Please enter your comment!
Please enter your name here