Home ಕರ್ನಾಟಕ ‘ಪಾಕ್ ಪರ ಘೋಷಣೆ ಪ್ರಕರಣ ’ | ಬಿಜೆಪಿ ಕಾರ್ಯಕರ್ತರ ಪ್ರಕರಣವೂ ತನಿಖೆ: ಡಿಸಿಎಂ ಡಿ.ಕೆ.ಶಿವಕುಮಾರ್

‘ಪಾಕ್ ಪರ ಘೋಷಣೆ ಪ್ರಕರಣ ’ | ಬಿಜೆಪಿ ಕಾರ್ಯಕರ್ತರ ಪ್ರಕರಣವೂ ತನಿಖೆ: ಡಿಸಿಎಂ ಡಿ.ಕೆ.ಶಿವಕುಮಾರ್

17
0

ಬೆಂಗಳೂರು: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ ಪ್ರಕರಣವನ್ನು ತನಿಖೆ ಮಾಡುತ್ತೇವೆ. ಇದಕ್ಕೆ ಬಿಜೆಪಿ ಸ್ನೇಹಿತರು ಉತ್ತರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಎಂದು ಕೆಲ ಸಚಿವರು ನೀಡಿದ್ದ ಹೇಳಿಕೆ ಕುರಿತು ಮಂಗಳವಾರ ಸದಾಶಿವನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಚಿವರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಇಲ್ಲಿ ವಿಡಿಯೋ ತಿರುಚಿರಬಹುದು. ಇಲ್ಲಿ ನಮ್ಮ ಅಭಿಪ್ರಾಯಕ್ಕಿಂತ ಪೊಲೀಸರ ತನಿಖೆಯ ವರದಿ ಮುಖ್ಯ ಎಂದರು.

ಈ ಪ್ರಕರಣದ ತನಿಖೆಗಾಗಿ ಧ್ವನಿ ಮಾದರಿ ನೀಡಬೇಕು. ನಿನ್ನೆಯೆ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಮಂಡ್ಯದಲ್ಲಿ ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿದ್ದ ಪ್ರಕರಣವನ್ನು ತನಿಖೆ ಮಾಡುತ್ತೇವೆ. ಬಿಜೆಪಿ ಸ್ನೇಹಿತರು ಅದಕ್ಕೂ ಉತ್ತರ ನೀಡಬೇಕು ಎಂದು ಶಿವಕುಮಾರ್ ತಿರುಗೇಟು ನೀಡಿದರು.

ದೇಶದ್ರೋಹ ಕೆಲಸದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಪೊಲೀಸರ ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಈ ಬಗ್ಗೆ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂದು ನಮ್ಮ ರಾಜ್ಯಸಭಾ ಸದಸ್ಯರು ಅವತ್ತೇ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿಯವರು ತಮಗೆ ಬೇಕಾದವರ ಕೈಯಿಂದ ಏನೇ ವರದಿ ತರಿಸಿಕೊಳ್ಳಬಹುದು ಅದು ಅಧಿಕೃತವಲ್ಲ. ಪೊಲೀಸ್ ಅಧಿಕಾರಿಗಳು ಸಮಗ್ರ ತನಿಖೆ ಮಾಡಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನನ್ನ ಪ್ರಕಾರ ಇಲ್ಲಿ ಯಾರೂ ತಪ್ಪು ಮಾಡಿಲ್ಲ. ಆದರೆ ತನಿಖೆ ಪ್ರಕ್ರಿಯೆಯಲ್ಲಿದೆ ಎಂದು ಅವರು ತಿಳಿಸಿದರು.

ನಿನ್ನೆ ನಾನು, ಮುಖ್ಯಮಂತ್ರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಗ್ಯಾರಂಟಿ ಸಮಿತಿಯಲ್ಲಿ ಕಾರ್ಯಕರ್ತರಿಗೆ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇದರಲ್ಲಿ ನಾಲ್ಕು ಸಾವಿರ ಕಾರ್ಯಕರ್ತರನ್ನು ನಾಮನಿರ್ದೇಶನ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಮಾ.7ರಂದು ಚುನಾವಣಾ ಸಮಿತಿ ಸಭೆ: ಮಾ.7ರಂದು ದಿಲ್ಲಿಯಲ್ಲಿ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ನಾನು ಹಾಗೂ ಮುಖ್ಯಮಂತ್ರಿ ಇದರಲ್ಲಿ ಭಾಗವಹಿಸಿ ಮುಂಬರುವ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತೇವೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here