ಮಣಿಪಾಲ, ಮೇ 12: ಪಾರ್ಟ್‌ಟೈಮ್ ಉದ್ಯೋಗದ ಆಮಿಷಕ್ಕೆ ಸಿಲುಕಿದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಶಂಕರಪುರದಲ್ಲಿ ನಡೆದಿದೆ.
ಶಂಕರಪುರದ ಜೆನಿಫರ್ ಅವರ ಮೊಬೈಲ್‌ಗೆ ಆನ್ ಲೈನ್ ಪಾರ್ಟ್ ಟೈಮ್ ಜಾಬ್ ಕುರಿತು ಸಂದೇಶ ಬಂದಿದ್ದು, ಅಪರಿಚಿತ ವ್ಯಕ್ತಿಯೊಬ್ಬ ವಾಟ್ಸಾಪ್ ಮೂಲಕ ಲಿಂಕ್‌ವೊಂದನ್ನು ಕಳಿಸಿ ಟೆಲಿಗ್ರಾಮ್ ಆ್ಯಫ್‌ನಲ್ಲಿರುವ ಓಯಸಿಸ್ ಫೈನಾನ್ಸ್ ಎಂಬ ಗ್ರೂಪ್‌ಗೆ ಜಾಯಿನ್ ಆಗುವಂತೆ ತಿಳಿಸಿದ್ದ. ಅದರಂತೆ ಜೆನಿಫರ್ ಗ್ರೂಪ್‌ಗೆ ಸೇರಿದ್ದರು.
ಟೆಲಿಗ್ರಾಮ್ ಗ್ರೂಪ್‌ನಲ್ಲಿರುವ ಅಪರಿಚಿತ ವ್ಯಕ್ತಿಯು ವಿವಿಧ ರೀತಿಯ ಟಾಸ್ಕ್‌ಗಳನ್ನು ನೀಡಿ ಅದನ್ನು ಪುರ್ಣಗೊಳಿಸಿದರೆ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುವುದಾಗಿ ನಂಬಿಸಿ ಜೆನಿಫರ್ ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದರು. ವಿವಿಧ ರೀತಿಯ ಟಾಸ್ಕ್‌ಗಳನ್ನು ಪೂರ್ಣಗೊಳಿಸಿದ ಅನಂತರ 18,375 ರೂ. ಕಂತುಗಳಲ್ಲಿ ಜೆನಿಫರ್ ಅವರ ಖಾತೆಗೆ ಜಮೆಯಾಗಿತ್ತು.
ಇದರ ನಂತರ ಈ ಅಪರಿಚಿತ ವ್ಯಕ್ತಿ ಇನ್ನೂ ಹೆಚ್ಚು ಲಾಭ ಪಡೆಯಲು ಇನ್ನೂ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ತಿಳಿಸಿದಂತೆ ಜೆನಿಫರ್ ಅವರು 7,75,000ರೂ.ಗಳನ್ನು ಮೇ 9ರಂದು ವರ್ಗಾಯಿಸಿದ್ದರು. ಆದರೆ ಆ ವ್ಯಕ್ತಿ ಹಣವನ್ನು ನೀಡದೆ ವಂಚಿಸಿದ್ದಾನೆ ಎಂದು ಜೆನಿಫರ್ ಅವರು ಮಣಿಪಾಲ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.