Home ಕರ್ನಾಟಕ ಪುಣೆ ಪೋಲಿಸರ ಸಂಪರ್ಕವಿದ್ದ ಬಾಡಿಗೆ ಹ್ಯಾಕರ್‌ಗಳ ಗುಂಪು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳ ಕಂಪ್ಯೂಟರ್‌ಗಳಲ್ಲಿ ಇಮೇಲ್‌ಗಳನ್ನು...

ಪುಣೆ ಪೋಲಿಸರ ಸಂಪರ್ಕವಿದ್ದ ಬಾಡಿಗೆ ಹ್ಯಾಕರ್‌ಗಳ ಗುಂಪು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳ ಕಂಪ್ಯೂಟರ್‌ಗಳಲ್ಲಿ ಇಮೇಲ್‌ಗಳನ್ನು ಸೇರಿಸಿತ್ತು: ನೂತನ ಕೃತಿಯಲ್ಲಿ ಬಹಿರಂಗ

25
0

ಹೊಸದಿಲ್ಲಿ: ಭೀಮಾ ಕೋರೆಗಾಂವ್ ಪ್ರಕರಣದಲ್ಲಿ 16 ಜನರನ್ನು ಜೈಲಿಗೆ ತಳ್ಳಲು ಬಳಕೆಯಾಗಿದ್ದ ‘ಸಾಕ್ಷ್ಯ’ಗಳನ್ನು ಬಾಡಿಗೆ ಹ್ಯಾಕರ್‌ಗಳ ಗುಂಪೊಂದು ದೂರದಿಂದಲೇ ಅವರ ಕಂಪ್ಯೂಟರ್‌ಗಳಲ್ಲಿ ಸೇರಿಸಿರುವ ಸಾಧ್ಯತೆಯಿದೆ ಎಂದು ಇತ್ತೀಚಿಗೆ ಬಿಡುಗಡೆಗೊಂಡಿರುವ ಕೃತಿಯೊಂದರಲ್ಲಿ ಪ್ರತಿಪಾದಿಸಲಾಗಿದೆ. ಈ ಗುಂಪು ವಿಶ್ವಾದ್ಯಂತ ಗ್ರಾಹಕರನ್ನು ಹೊಂದಿದ್ದು,‌ ಅದರ ಕೇಂದ್ರಬಿಂದು ಭಾರತದಲ್ಲಿದೆ ಎಂದು ಕೃತಿಯಲ್ಲಿ ಹೇಳಲಾಗಿದೆ.

ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಮಾನವಶಾಸ್ತ್ರ ಪ್ರೊಫೆಸರ್ ಆಗಿರುವ ಅಲ್ಪಾ ಶಾ ಅವರು ತನ್ನ ‘ದಿ ಇನ್‌ಕಾರ್ಸಿನೇಷನ್ಸ್:ಭೀಮಾ ಕೋರೆಗಾಂವ್ ಆ್ಯಂಡ್ ಸರ್ಚ್ ಫಾರ್ ಡೆಮಾಕ್ರಸಿ ಇನ್ ಇಂಡಿಯಾ’ ಕೃತಿಯಲ್ಲಿ ಹ್ಯಾಕರ್‌ಗಳ ಗುಂಪು ಪುಣೆಯ ಪೋಲಿಸ್ ಅಧಿಕಾರಿಯೋರ್ವರೊಂದಿಗೆ ನಂಟು ಹೊಂದಿತ್ತು ಎಂದು ಆರೋಪಿಸಲು ಸೈಬರ್ ಭದ್ರತಾ ವಿಶ್ಲೇಷಕರು ಮತ್ತು ಸಂಶೋಧಕರೊಂದಿಗಿನ ಸಂದರ್ಶನಗಳನ್ನು ಉಲ್ಲೇಖಿಸಿದ್ದಾರೆ. ತನ್ನ ಕೃತಿಯಲ್ಲಿ ಅವರು,‌ ಭೀಮಾ ಕೋರೆಗಾಂವ್ ಪ್ರಕರಣದ ಕನಿಷ್ಠ ಮೂವರು ಆರೋಪಿಗಳ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡುವಲ್ಲಿ ಮತ್ತು ಅವುಗಳಲ್ಲಿ ಅವರನ್ನು ಸಿಲುಕಿಸಲು ಬಳಸಿದ್ದ ಇಮೇಲ್‌ಗಳು ಮತ್ತು ಫೈಲ್‌ಗಳನ್ನು ಸೇರಿಸುವಲ್ಲಿ ಪೋಲಿಸರ ಪಾತ್ರವನ್ನು ವಿವರಿಸಿದ್ದಾರೆ.

2018,‌ ಜ.1ರಂದು ಮಹಾರಾಷ್ಟ್ರದ ಪುಣೆ ಸಮೀಪದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ದಲಿತರನ್ನು ಗುರಿಯಾಗಿಸಿಕೊಂಡು ನಡೆದಿದ್ದ ಕೋಮು ಗಲಭೆಯ ಹಿಂದುತ್ವ ಪ್ರಚೋದಕರಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಈ 16 ಬಂಧನಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಶಾ ತನ್ನ ಕೃತಿಯಲ್ಲಿ ಹೇಳಿದ್ದಾರೆ.

ಭೀಮಾ ಕೋರೆಗಾಂವ ಜಾತಿ ಹಿಂಸಾಚಾರ ಪ್ರಕರಣದಲ್ಲಿ ದಿ.ಫಾದರ್ ಸ್ಟ್ಯಾನ್ ಸ್ವಾಮಿ ಮತ್ತು ಅವರ ಸಹಆರೋಪಿಗಳಾದ ರೋನಾ ವಿಲ್ಸನ್ ಹಾಗೂ ಸುರೇಂದ್ರ ಗಡ್ಲಿಂಗ್ ಅವರ ಕಂಪ್ಯೂಟರ್‌ಗಳನ್ನು ಹ್ಯಾಕ್ ಮಾಡಲಾಗಿತ್ತು ಮತ್ತು ಇವುಗಳಲ್ಲಿ ಒಬ್ಬನೇ ಹ್ಯಾಕರ್‌ನ ಕೈವಾಡವಿತ್ತು ಎನ್ನುವುದನ್ನು ಅಮೆರಿಕದ ಡಿಜಿಟಲ್ ವಿಧಿವಿಜ್ಞಾನ ಸಂಸ್ಥೆ ಆರ್ಸೆನಲ್ ಕನ್ಸ್‌ಲ್ಟಿಂಗ್ ಪತ್ತೆ ಹಚ್ಚಿದೆ ಎನ್ನುವುದನ್ನು ಮಾಧ್ಯಮಗಳು ಡಿಸೆಂಬರ್ 2022ರಷ್ಟು ಹಿಂದೆಯೇ ವರದಿ ಮಾಡಿದ್ದವು.ವಿಲ್ಸನ್ ಅವರ ಕಂಪ್ಯೂಟರ್‌ನಲ್ಲಿ ಫೈಲ್‌ಗಳನ್ನು ಸೇರಿಸಲು ಹ್ಯಾಕರ್ ಅದನ್ನು 22 ತಿಂಗಳುಗಳ ಕಾಲ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಎಂದೂ ಆರ್ಸೆನಲ್ 2021,‌ ಫೆ.10ರಂದು ಹೇಳಿತ್ತು. ‘ಇನ್ನೊಂದು ರಾಜೀವ ಗಾಂಧಿ ಮಾದರಿಯ ಘಟನೆಯಲ್ಲಿ’ ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗಾಗಿ ಮಾವೋವಾದಿಗಳ ‘ಒಳಸಂಚ’ನ್ನು ಬಹಿರಂಗಗೊಳಿಸಿದ್ದ ‘ತನಿಖೆಗೆ’ ಇವೇ ಫೈಲ್‌ಗಳು ಆಧಾರವಾಗಿದ್ದವು.

ಇ-ಮೇಲ್ ಸೇವೆಯನ್ನು ಒದಗಿಸುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಭದ್ರತಾ ವಿಶ್ಲೇಷಕರೋರ್ವರು ಹ್ಯಾಕರ್‌ಗಳನ್ನು ಪುಣೆಯ ಪೋಲಿಸ್ ಅಧಿಕಾರಿಯೊಂದಿಗೆ ತಳುಕು ಹಾಕಲು ಅಗತ್ಯ ಮಾಹಿತಿಗಳನ್ನು ಅಮೆರಿದ ಸೈಬರ್ ಭದ್ರತಾ ಪತ್ರಕರ್ತ ಆ್ಯಂಡಿ ಗ್ರೀನ್‌ಬರ್ಗ್ ಅವರಿಗೆ ಒದಗಿಸಿದ್ದರು ಎಂದು ಶಾ ತನ್ನ ಕೃತಿಯಲ್ಲಿ ಬರೆದಿದ್ದಾರೆ. 2012ರಷ್ಟು ಹಿಂದಿನಿಂದಲೇ ಭಾರತದ ನೂರಾರು ಮಾನವ ಹಕ್ಕು ಹೋರಾಟಗಾರರು, ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ವಕೀಲರನ್ನು ಗುರಿಯಾಗಿಸಿಕೊಂಡಿದ್ದ ಹ್ಯಾಕಿಂಗ್ ಅಭಿಯಾನದ ಕುರಿತು ಕ್ಯಾಲಿಫೋರ್ನಿಯಾದ ಸೈಬರ್ ಭದ್ರತಾ ಸಂಸ್ಥೆ ಸೆಂಟಿನೆಲ್‌ಒನ್ ನಡೆಸಿದ್ದ ನೂತನ ಸಂಶೋಧನೆಯ ವರದಿಯನ್ನು ಗ್ರೀನ್‌ಬರ್ಗ್ ಜೂನ್ 2022ರಲ್ಲಿ ಪ್ರಕಟಿಸಿದ್ದರು. ಭೀಮಾ ಕೋರೆಗಾಂವ್ ಪ್ರಕರಣದೊಂದಿಗೆ ಗುರುತಿಸಿಕೊಂಡಿದ್ದವರು ಈ ಹ್ಯಾಂಕಿಗ್ ಅಭಿಯಾನದ ಗಮನಾರ್ಹ ಗುರಿಗಳಾಗಿದ್ದರು ಎಂದು ಶಾ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here