ಉಡುಪಿ: ಜ. 18ರ ಮುಂಜಾನೆ ನಾಲ್ಕನೇ ಬಾರಿಗೆ ಪರ್ಯಾಯ ಸರ್ವಜ್ಞ ಪೀಠಾರೋಹಣ ಮಾಡಲಿರುವ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಕಿರಿಯ ಯತಿ ಶ್ರೀಸುಶ್ರೀಂದ್ರ ತೀರ್ಥರೊಂದಿಗೆ ಪುರಪ್ರವೇಶ ಕಾರ್ಯಕ್ರಮವು ಇಂದು ಸಂಜೆ ಅದ್ದೂರಿಯಾಗಿ ಜರಗಿತು.
ಪರ್ಯಾಯ ಪೀಠಾರೋಹಣಕ್ಕೆ ಮುನ್ನ ದೇಶದ ವಿವಿಧ ತೀರ್ಥಕ್ಷೇತ್ರಗಳ ಸಂಚಾರ ಮುಗಿಸಿ ಉಡುಪಿಗೆ ಅಧಿಕೃತವಾಗಿ ಪುರಪ್ರವೇಶ ಮಾಡಿದ ಉಭಯ ಪುತ್ತಿಗೆ ಶ್ರೀಯನ್ನು ಸಂಜೆ 4ಗಂಟೆಗೆ ಪ್ರಾರಂಭಗೊಂಡ ಅದ್ದೂರಿಯ ಸಾಂಪ್ರದಾಯಿಕ ಮೆರವಣಿಗೆಯ ಮೂಲಕ ಅಲಂಕೃತವಾದ ವಿಶೇಷ ವಾಹನದಲ್ಲಿ ರಥಬೀದಿಗೆ ಕರೆತರಲಾಯಿತು.
ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ ಪುರಪ್ರವೇಶ ಮಾಡಲಾಯಿತು.
ಹತ್ತಾರು ಬಗೆಯ ಸ್ಥಬ್ದಚಿತ್ರಗಳು, ಸಮಾಜದ ವಿವಿಧ ಸಮುದಾಯಗಳ ಭಕ್ತರ ತಂಡೋಪತಂಡಗಳು, ವಾದ್ಯಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು. ಹುಲಿವೇಷಧಾರಿಗಳು, ಕೇರಳ ವಾದ್ಯ, ಚೆಂಡಬಳಗ, ಭಜನಾ ತಂಡಗಳು, ಇಸ್ಕಾನ್ ನ ಕೃಷ್ಣ ಭಕ್ತರು, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ನಾಗಸ್ವರ ಮಂಗಳವಾದ್ಯಗಳು, ಕುಣಿತದ ಭಜನೆ, ಹರಿದಾಸರು, ಮರಕಾಲು ನಡಿಗೆ ಮೆರವಣಿಗೆಯಲ್ಲಿ ಗಮನ ಸೆಳೆದವು.
ಹಯಗ್ರೀವ ದೇವರು, ಕೃಷ್ಣಸಾರಥಿ, ಪಂಡಾಪುರದ ಪಾಂಡುರಂಗ ದೇವರು, ಚಿನ್ನದ ಪಲ್ಲಕ್ಕಿ, ಗರುಡವಾಹನ ವಿಷ್ಣು ಮತ್ತಿ ತರ ಸ್ಥಬ್ದಚಿತ್ರಗಳು ಮೆರವಣಿಗೆಗೆ ಮಿನಿ ಪರ್ಯಾಯೋತ್ಸವದ ರೂಪ ನೀಡಿದ್ದವು.
ಜೋಡುಕಟ್ಟೆಯಿಂದ ಹೊರಟ ಮೆರವಣಿಗೆಯು ಕೋರ್ಟ್ ರಸ್ತೆ, ಡಯಾನ ವೃತ್ತ, ಕವಿ ಮುದ್ದಣ ಮಾರ್ಗ, ತ್ರಿವೇಣಿ ಮಾರ್ಗ, ಸಂಸ್ಕೃತ ಕಾಲೇಜು ಮೂಲಕ ರಥಬೀದಿಯನ್ನು ಪ್ರವೇಶಿಸಿತು. ಅಲ್ಲಿಂದ ಶ್ರೀಕೃಷ್ಣ ಮಠ ಪ್ರವೇಶಿಸಿ ಶ್ರೀಕೃಷ್ಣ, ಮುಖ್ಯ ಪ್ರಾಣರ ದರ್ಶನ ಪಡೆದ ಪುತ್ತಿಗೆ ಶ್ರೀಗಳು, ಅನಂತೇಶ್ವರ, ಚಂದ್ರಮೌಳೇಶ್ವರನಿಗೂ ಪ್ರಾರ್ಥನೆ ಸಲ್ಲಿಸಿದರು. ಸಂಜೆ 6.45ಕ್ಕೆ ಶ್ರೀಗಳು ಪುತ್ತಿಗೆ ಮಠವನ್ನು ಪ್ರವೇಶಿಸಿದರು. ಅವರನ್ನು ಮಠದ ಅಧಿಕಾರಿಗಳು ವಿದ್ಯುಕ್ತವಾಗಿ ಸ್ವಾಗತಿಸಿದರು. ಬಳಿಕ ರಥಬೀದಿಯಲ್ಲಿ ಪೌರ ಸನ್ಮಾನ ನಡೆಯಿತು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಚ್.ಎಸ್.ಬಲ್ಲಾಳ್, ಕಾರ್ಯಾಧ್ಯಕ್ಷ ಕೆ.ರಘುಪತಿ ಭಟ್ ಸೇರಿದಂತೆ ನೂರಾರು ಮಂದಿ ಗಣ್ಯರು ಉಪಸ್ಥಿತರಿದ್ದರು.