ಪುತ್ತೂರು: ನಗರ ಸಭೆಯ ವಾರ್ಡ್ 1 ಹಾಗೂ ವಾರ್ಡ್ 11ರ ಸದಸ್ಯರಿಬ್ಬರ ನಿಧನದಿಂದಾಗಿ ತೆರವಾಗಿದ್ದ ಎರಡು ಸ್ಥಾನಗಳಿಗೆ ಬುಧವಾರ ಉಪಚುನಾವಣೆ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ತನಕ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯಿತು. ವಾರ್ಡ್ 1ರಲ್ಲಿ ಶೇ. 73.45 ಹಾಗೂ ವಾರ್ಡ್ 11ರಲ್ಲಿ ಶೇ.61.07 ಮತದಾನವಾಗಿದೆ.
ವಾರ್ಡ್ 1ಕ್ಕೆ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆ ಉತ್ತರ ಭಾಗದಲ್ಲಿ ತೆರೆಯಲಾಗಿರುವ ಮತಗಟ್ಟೆಯಲ್ಲಿ ಮತ ದಾನ ನಡೆಸಲಾಯಿತು. ಈ ವಾರ್ಡ್‍ನಲ್ಲಿ 634 ಪುರುಷರು, 670 ಮಹಿಳೆಯರು ಸೇರಿದಂತೆ ಒಟ್ಟು 1304 ಮತದಾರರಿದ್ದು, ಈ ಪೈಕಿ 449 ಪುರುಷರು, 509 ಮಹಿಳೆಯರು ಸೇರಿದಂತೆ ಒಟ್ಟು 958 ಮತದಾರರು ಮತ ಚಲಾಯಿಸಿದ್ದಾರೆ. ಶೇ. 73.46 ಮತದಾನವಾಗಿದೆ.
ವಾರ್ಡ್ 11ರ ಮತದಾನವು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾಗ ಸಂಖ್ಯೆ 13 ಹಾಗೂ ಭಾಗ ಸಂಖ್ಯೆ 14 ಎರಡು ಮತಗಟ್ಟೆಗಳಲ್ಲಿ ನಡೆಯಿತು. ಈ ವಾರ್ಡ್‍ನಲ್ಲಿ 856 ಪುರುಷರು, 868 ಮಹಿಳೆಯರು ಸೇರಿದಂತೆ ಒಟ್ಟು 1724 ಮತದಾರರಿದ್ದು, ಈ ಪೈಕಿ 525 ಪುರುಷರು, 528 ಮಹಿಳೆಯರು ಸೇರಿದಂತೆ ಒಟ್ಟು 1053 ಮತದಾರರು ಮತ ಚಲಾಯಿಸಿದ್ದಾರೆ. ಇಲ್ಲಿ ಶೇ. 61.07 ಮತದಾನವಾಗಿದೆ.
ವಾರ್ಡ್ 1ರ ಸಾಮಾನ್ಯ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಬಿಜೆಪಿಯ ಶಿವರಾಮ ಸಪಲ್ಯ ಹಾಗೂ ವಾರ್ಡ್ 11ರ ಮೀಸಲು ಸ್ಥಾನದಿಂದ ಚುನಾಯಿತ ಸದಸ್ಯರಾಗಿದ್ದ ಕಾಂಗ್ರೆಸ್‍ನ ಶಕ್ತಿ ಸಿನ್ಹ ಅವರ ನಿಧನದಿಂದ ತೆರವಾದ ಸ್ಥಾನಗಳಿಗೆ ಉಪಚುನಾವಣೆ ನಡೆದಿತ್ತು. ವಾರ್ಡ್ 1ರ ಸಾಮಾನ್ಯ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯಿಂದ ಸುನೀತಾ ಶಿವನಗರ, ಕಾಂಗ್ರೆಸ್‍ನಿಂದ ದಿನೇಶ್ ಕೆ. ಶೇವಿರೆ ಮತ್ತು ಪುತ್ತಿಲ ಪರಿವಾರದಿಂದ ಅನ್ನಪೂರ್ಣ ಎಸ್.ಕೆ. ರಾವ್ ಕಣದಲ್ಲಿದ್ದಾರೆ. ವಾರ್ಡ್ 11ರ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ರೈ ನೆಲ್ಲಿಕಟ್ಟೆ, ಕಾಂಗ್ರೆಸ್‍ನಿಂದ ದಾಮೋದರ ಭಂಡಾರ್ಕರ್ ನೆಲ್ಲಿಕಟ್ಟೆ ಹಾಗೂ ಪುತ್ತಿಲ ಪರಿವಾರ ಬೆಂಬಲಿತರಾಗಿ ಚಿಂತನ್ ಪಿ. ಅಂದ್ರಟ್ಟ ಕಣದಲ್ಲಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಗಳ ಮಧ್ಯೆ ನಡುವೆ ತ್ರಿಕೋನ ಸ್ಪರ್ಧೆಯ ಪೈಪೋಟಿ ಏರ್ಪಟ್ಟಿದೆ.
ಚುನಾವಣಾಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಹಾಗೂ ನಗರ ಸಭಾ ಇಂಜಿನಿಯರ್ ಶಬರೀನಾಥ್ ಸಹಾಯಕ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು.