ವಿಜಯಪುರ: ಪೆಟ್ರೋಲ್ ಬೆಲೆ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. ಪ್ರಜಾಪ್ರಭುತ್ವದಲ್ಲಿ ಸೋಲು ಗೆಲುವು ಇದ್ದದ್ದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ವಿಜಯಪುರ ಜಿಲ್ಲೆಯ ಇಂಚಗೇರಿ ಗ್ರಾಮದ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಸಿಎಂ ಮಾತನಾಡಿದರು.
ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಕುರಿತು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಸೇಡಿಗಾಗಿ ದರ ಏರಿಕೆ ಮಾಡಿದ್ದಾರೆ ಎಂಬ ಹೇಳಿಕೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, “ವಿಜಯಪುರದಲ್ಲಿ ನಾವು ಸೋತಿದ್ದೇವೆ. ಕರ್ನಾಟಕದಲ್ಲಿ ನಾವು ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ. ವಿಜಯಪುರದಲ್ಲಿ ಗೆಲ್ಲುತ್ತೇವೆ ಎಂಬ ನಿರೀಕ್ಷೆಯಿತ್ತು. ಕರ್ನಾಟಕದಲ್ಲಿ ಕಳೆದ ಚುನಾವಣೆಗೆ ಹೋಲಿಕೆ ಮಾಡಿದರೆ , ಈ ಬಾರಿ ಒಂಭತ್ತು ಸ್ಥಾನಗಳನ್ನು ಗಳಿಸಿದ್ದೇವೆ. ಬಿಜೆಪಿ ಕಳೆದ ಬಾರಿ 25 ಇದ್ದನ್ನು ಈ ಬಾರಿ 19 ಕ್ಕೆ ಇಳಿದಿದ್ದಾರೆ. ನಮಗೆ ಶೇ.13ರಷ್ಟು ಮತ ಹಂಚಿಕೆಯಾಗಿದೆ. ನಾವು ಸೋತಿದ್ದೇವೆಯೇ ಎಂದು ಪ್ರಶ್ನಿಸಿದರು. ನಮ್ಮ ಲೆಕ್ಕಾಚಾರದ ಪ್ರಕಾರ, ನಿರೀಕ್ಷೆ ಮಾಡಿದಷ್ಟು ಸ್ಥಾನಗಳು ಬಂದಿಲ್ಲ ಅಷ್ಟೇ” ಎಂದರು.
ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಡಿಮೆ ಇದೆ :
ಪೆಟ್ರೋಲ್-ಡೀಸೆಲ್ ದರ ಏರಿಕೆಗೂ ಚುನಾವಣಾ ಫಲಿತಾಂಶಕ್ಕೂ ಸಂಬಂಧವಿಲ್ಲ. 11.4.2021ರಂದು ಪೆಟ್ರೋಲ್ ಮೇಲೆ ಶೇ.35ರಷ್ಟು ತೆರಿಗೆ ಹಾಗೂ ಡೀಸೆಲ್ ಮೇಲೆ ಶೇ.24ರಷ್ಟು ತೆರಿಗೆ ಹಾಕುತ್ತಿದ್ದರು. ನಂತರ ಕೇಂದ್ರದಲ್ಲಿ ಇಳಿಕೆ ಮಾಡಿದ್ದರಿಂದ ಇವರೂ 35 ರಿಂದ 25.92 ಕ್ಕೆ ನಂತರ ಇಳಿಸಿದರು. ಈಗ ಕರ್ನಾಟಕದಲ್ಲಿ 99.85 ರೂ ಪೆಟ್ರೋಲ್ ಬೆಲೆಯಿದೆ. ನಿನ್ನೆಯಿಂದ ಮೂರು ರೂಪಾಯಿ ಹೆಚ್ಚು ಮಾಡಿದ್ದೇವೆ. 102 ರೂ.ಗೆ ಹೆಚ್ಚಾಗಿದೆ. ಇದು ತಮಿಳುನಾಡಿಗೆ ಸಮವಾಗಿದೆ. ಕೇರಳದ ಕಾಸರಗೋಡಿನಲ್ಲಿ 106.66 ರೂ. ಇದೆ. ಆಂಧ್ರದ ಅನಂತಪುರದಲ್ಲಿ 109.44 , ತೆಲಂಗಾಣದ ಹೈದರಾಬಾದ್ ನಲ್ಲಿ 107.40 ಹಾಗೂ ಮಹಾರಾಷ್ಟ್ರದಲ್ಲಿ 104.46 ರೂ.ಇದೆ. ಇವೆಲ್ಲಕ್ಕೆ ಹೋಲಿಸಿದರೆ ನಮ್ಮ ದರ ಕಡಿಮೆ ಇದೆ ಎಂದರು.