Home Uncategorized ಪೇಟಿಎಂ ಪತನ: ಫಿನ್ಟೆಕ್ ವಲಯದಲ್ಲಿ ನಿಜಕ್ಕೂ ಏನಾಗುತ್ತಿದೆ?

ಪೇಟಿಎಂ ಪತನ: ಫಿನ್ಟೆಕ್ ವಲಯದಲ್ಲಿ ನಿಜಕ್ಕೂ ಏನಾಗುತ್ತಿದೆ?

16
0

‘ಪೇಟಿಎಂ ಕರೋ’ ಎಂದು ಹಾಡುತ್ತ ಜಾದೂ ಮಾಡಿದ್ದ, ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ತನ್ನ ಬಲಕ್ಕಿದ್ದಾರೆ ಎಂದು ಬಿಂಬಿಸಿಕೊಂಡಿದ್ದ ಆ ಸಂಸ್ಥೆ ಇಂದು ಅಕ್ಷರಶಃ ದಿಕ್ಕೆಟ್ಟಿದೆ. ಏನೇನೋ ಆಡಂಬರಗಳೊಂದಿಗೆ ಬಂದಿದ್ದ ಅದು ಈಗ ನೆಲ ಕಚ್ಚಿದೆ. ಅತ್ತ ಆರ್‌ಬಿಐ ನಿರ್ದಾಕ್ಷಿಣ್ಯವಾಗಿ ನಿರ್ಬಂಧ ಹೇರಿದ್ದರೆ, ಇತ್ತ ಮೋದಿ ಸರಕಾರ ಕೂಡ ಅದರ ಕೈಬಿಟ್ಟಿದೆ.

ಇದೇ ಮಾರ್ಚ್ 1ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (ಪಿಪಿಬಿ) ಬಂದ್ ಆಗುತ್ತಿದೆ. ಹಲವು ಬಗೆಯ ನಿರ್ಬಂಧಗಳನ್ನು ಪಿಪಿಬಿ ಮೇಲೆ ಆರ್‌ಬಿಐ ಹೇರಿದೆ. ಅದು ನಿರಂತರವಾಗಿ ಹಲವಾರು ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿದೆ ಎಂಬುದು ಆರ್‌ಬಿಐ ನಿರ್ಬಂಧ ಹೇರುತ್ತಿರುವುದಕ್ಕೆ ಕಾರಣ. ವಿವರವಾಗಿ ಕಾರಣಗಳನ್ನು ಆರ್‌ಬಿಐ ಸೂಚಿಸಿಲ್ಲವಾದರೂ, ಬ್ಯಾಂಕ್ ಖಾತೆಗಳಿಗೆ ಅಗತ್ಯವಿರುವ ಕೆವೈಸಿ ದಾಖಲೆಗಳನ್ನು ಪಿಪಿಬಿ ಸರಿಯಾಗಿ ನಿರ್ವಹಿಸಿಲ್ಲ ಎಂಬುದು ಕೂಡ ವರದಿಗಳು ಹೇಳುತ್ತಿವೆ.

ಎರಡು ವರ್ಷದ ಹಿಂದೆಯೂ ಹೀಗೇ ಆಗಿತ್ತು. 2022ರ ಮಾರ್ಚ್ ತಿಂಗಳಲ್ಲಿ ಕೂಡ ಪಿಪಿಬಿ ಮೇಲೆ ಆರ್‌ಬಿಐ ನಿರ್ಬಂಧ ಹೇರಿತ್ತು. ಅದಾಗಿ ಸುಮಾರು ಎರಡು ವರ್ಷಗಳ ನಂತರ ಈಗ ಹೊಸದಾಗಿ ನಿರ್ಬಂಧಗಳನ್ನು ಹೇರಲಾಗಿದೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಬ್ಯಾಂಕ್ ಆರ್‌ಬಿಐ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ ಎಂದು ಹೇಳಿದ್ದರು. ಆದರೆ ಮೋದಿ ಫೋಟೊ ಎದುರಿಗಿಟ್ಟುಕೊಂಡು ಆಮೇಲೆ ಅವರು ಆಡಿದ ಆಟ ಇಂದು ಅದನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.

ಆರ್‌ಬಿಐ ಹೇರಿರುವ ನಿರ್ಬಂಧಗಳೇನು?

1. ಆರ್‌ಬಿಐ ನಿರ್ಬಂಧಗಳ ಅನ್ವಯ ಫೆಬ್ರವರಿ 29ಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಸೇವೆಗಳು ಸ್ಥಗಿತಗೊಳ್ಳಲಿವೆ.

2. ಖಾತೆಗಳಿಗೆ ಹೊಸದಾಗಿ ಠೇವಣಿಗಳನ್ನು ಸ್ವೀಕರಿಸದಂತೆ ಮತ್ತು ಕ್ರೆಡಿಟ್ ವಹಿವಾಟುಗಳನ್ನು ಮಾಡದಂತೆ ನಿರ್ಬಂಧ ವಿಧಿಸಲಾಗಿದೆ.

3. ಫೆಬ್ರವರಿ 29ರ ನಂತರ ಗ್ರಾಹಕರ ಖಾತೆಗಳು ಅಥವಾ ಪ್ರಿಪೇಯ್ಡ್ ಸೇವೆಗಳಾದ ವ್ಯಾಲೆಟ್‌ಗಳು ಮತ್ತು ಫಾಸ್ಟ್ ಟ್ಯಾಗ್‌ಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ.

4. ಕ್ರೆಡಿಟ್ ವಹಿವಾಟುಗಳನ್ನು ನಡೆಸುವುದು ಅಥವಾ ಟಾಪ್-ಅಪ್ ತೆಗೆದುಕೊಳ್ಳುವುದನ್ನು ಆರ್‌ಬಿಐ ನಿರ್ಬಂಧಿಸಿದೆ.

5. ಪೇಟಿಎಂ ಮಾಲಕ ಸಂಸ್ಥೆಯಾದ ವನ್‌97 ಕಮ್ಯೂನಿಕೇಶನ್ಸ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವಿಸಸ್‌ನ ನೋಡಲ್ ಖಾತೆಗಳನ್ನು ಫೆಬ್ರವರಿ 29ರೊಳಗೆ ನಿಲ್ಲಿಸುವಂತೆಯೂ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

ಪೇಟಿಎಂ ಮೇಲೆ ಈಗ ಆರ್‌ಬಿಐ ನಿರ್ಬಂಧಗಳನ್ನು ಹೇರಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ

ಮೊದಲನೆಯದಾಗಿ,

ಡಿಜಿಟಲ್ ಪ್ಲಾಟ್ ಫಾರ್ಮ್‌ನಲ್ಲಿರುವ ಅನೇಕ ಸ್ಟಾರ್ಟ್‌ಅಪ್‌ಗಳು ನಿಯಮ ಪಾಲನೆಯ ಉಲ್ಲಂಘನೆಯ ಅಪಾಯದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲವೇ ಎಂಬುದೊಂದು ಪ್ರಶ್ನೆ ಏಳುತ್ತದೆ. ಗೇಮಿಂಗ್, ಗ್ಯಾಂಬ್ಲಿಂಗ್ ಮತ್ತು ಕ್ರಿಪ್ಟೋ ಸ್ಪೇಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪೆನಿಗಳು ಇದಕ್ಕೆ ಸರಿಯಾದ ಉದಾಹರಣೆಗಳಾಗಿವೆ. ಬಹುಶಃ ಅವು ತಮ್ಮ ವ್ಯವಹಾರವನ್ನು ತ್ವರಿತವಾಗಿ ಬೆಳೆಸುವುದರತ್ತ ಮೊದಲು ಗಮನ ಕೊಡುತ್ತವೆ ಮತ್ತು ಆ ಮೂಲಕ ನಿಯಂತ್ರಕರನ್ನೇ ಪ್ರಭಾವಿಸುವುದು ಸಾಧ್ಯ ಎಂದು ಭಾವಿಸುತ್ತವೆ. ಅಂಥ ಕಂಪೆನಿಗಳಲ್ಲಿ ಹಣ ಹೂಡುವವರು ಕೂಡ ಬಹುಶಃ ಹಾಗೆಯೇ ಯೋಚಿಸುತ್ತಾರೆ ಮತ್ತು ಚಿಲ್ಲರೆ ಹೂಡಿಕೆದಾರರಿಗೆ ತಮ್ಮ ಪಾಲನ್ನು ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಬಯಸಿ, ಅತ್ಯಂತ ಹೆಚ್ಚಿನ ಮೌಲ್ಯಗಳಲ್ಲಿ ಷೇರುಗಳನ್ನು ಖರೀದಿಸುತ್ತಾರೆ.

ಕೆಲವು ಹಂತದಲ್ಲಿ, ವಾಣಿಜ್ಯೋದ್ಯಮಿಗಳು ನಿಯಮ ಉಲ್ಲಂಘನೆಯ ಆರೋಪಗಳನ್ನು ಕಡೆಗಣಿಸುವ ಯೋಚನೆಗೂ ಹೋಗಬಹುದು. ವಾಣಿಜ್ಯೋದ್ಯಮದಲ್ಲಿ ಅಂಥ ಅಡಚಣೆಗಳಿರುತ್ತವೆ ಎಂದುಕೊಳ್ಳುವುದು ಮತ್ತು ಎಂಥದೋ ಆಶಾವಾದದೊಂದಿಗೆ ಮುಂದುವರಿಯುವುದು ನಡೆಯುತ್ತದೆ. ಆದರೆ ಆಶಾವಾದಿಯಾಗುವುದು ಬೇರೆ, ಅತಿಯಾದ ಆಶಾವಾದ ಬೇರೆ. ಎರಡರ ನಡುವಿನ ಗೆರೆ ಬಹಳ ತೆಳುವಾದದ್ದು ಮತ್ತು ಆಶಾವಾದವನ್ನು ಮೀರಿ ಅತಿಯಾದ ಆಶಾವಾದದಲ್ಲಿ ಮೈಮರೆತರೆ, ಎದುರಾಗಬಹುದಾದ ಅಪಾಯದ ಬಗ್ಗೆ ಎಚ್ಚರವೇ ಇಲ್ಲದೆ ಹೋಗಬಹುದು. ಪೇಟಿಎಂ ವಿಚಾರದಲ್ಲಿ ಬಹುಶಃ ಅದೇ ಆದಂತಿದೆ.

ಭಾರತದ ಹಲವಾರು ಹೊಸ ವಾಣಿಜ್ಯೋದ್ಯಮಿಗಳಿಗೆ ಸ್ಫೂರ್ತಿಯಾಗಿರುವುದು ಮೆಟಾ ಪ್ಲಾಟ್ಫಾರ್ಮ್ಸ್ ಸಿಇಒ ಮಾರ್ಕ್ ಝುಕರ್ಬರ್ಗ್ ಒಮ್ಮೆ ಹೇಳಿದ್ದ ಮಾತು: ‘‘ವೇಗವಾಗಿ ಹೋಗಿ ಮತ್ತು ಭಿನ್ನವಾದದ್ದನ್ನು ಕೊಡಿ. ವಿಭಿನ್ನವಾದದ್ದು ಇಲ್ಲದೇ ಹೋದರೆ ವೇಗ ಸಾಧ್ಯವಿಲ್ಲ’’. ಆದರೆ ಅದೇ ಸಂಸ್ಥೆ 2014ರ ಹೊತ್ತಿಗೆ ‘‘ವೇಗ ಬೇಕು, ಆದರೆ ಸ್ಥಿರ ಮೂಲಸೌಕರ್ಯಗಳೊಂದಿಗೆ ಇರಬೇಕು’’ ಎಂದು ತನ್ನ ಧ್ಯೇಯವನ್ನು ಬದಲಿಸಿತ್ತು. ನಿಯಮಗಳು ವೇಗವಾಗಿ ಹೋಗಲು ತೊಡಕು ಎಂಬುದು ಸಾಮಾನ್ಯ ಭಾವನೆ. ಹಾಗಾಗಿಯೇ ನೆಲದ ಕಾನೂನೆಂದರೆ ಅಸಡ್ಡೆ ತೋರುವವರು ಹೆಚ್ಚು. ಆದರೆ ನೆಲದ ಕಾನೂನುಗಳು ನೆಲದ ಕಾನೂನುಗಳೇ. ಯಾವುದೇ ಹೊಸ ಮತ್ತು ಅಭಿವೃದ್ಧಿಶೀಲ ಉದ್ಯಮದಲ್ಲಿ ಅವುಗಳನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ. ಝುಕರ್ಬರ್ಗ್ ಧ್ಯೇಯ ಬದಲಾದದ್ದು ಕೂಡ ಈ ಹಿನ್ನೆಲೆಯಲ್ಲಿಯೇ. ಅದನ್ನು ಭಾರತದ ಉದ್ಯಮಿಗಳು ಮಾತ್ರ ಇನ್ನೂ ಅರ್ಥ ಮಾಡಿಕೊಳ್ಳಬೇಕಾಗಿದೆ.

ಎರಡನೆಯದಾಗಿ,

ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿನ ಕೆಲವು ಹೊಸ ಉದ್ಯಮಿಗಳು ಮತ್ತಿತರರು ಸಾಮಾಜಿಕ ಮಾಧ್ಯಮದಲ್ಲಿ ಪೇಟಿಎಂ ಪೇಮೆಂಟ್ ಬ್ಯಾಂಕ್ ಅನ್ನು ಬೆಂಬಲಿಸಿದ್ದಾರೆ. ಫಿನ್ಟೆಕ್ ಹಾಗೂ ಸ್ಟಾರ್ಟ್‌ಅಪ್ ವಲಯಗಳ ಕೆಲವರು ಪಿಪಿಬಿ ಮೇಲಿನ ಕಠಿಣ ಕ್ರಮಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ಅವರು ಏನು ಹೇಳಲು ಹೊರಟಿದ್ದಾರೆ ಎಂಬುದು ಸ್ಪಷ್ಟ. ಸ್ಟಾರ್ಟಪ್‌ಗಳು ನಾಳೆ ದೊಡ್ಡ ಉದ್ಯಮಗಳಾಗಿ ಬೆಳೆಯಲು ನಿಯಮಗಳು ಹೆಚ್ಚು ಕಠಿಣವಲ್ಲದವಾಗಿರಬೇಕಾದ ಅಗತ್ಯವಿದೆ ಎಂಬುದು ಅವರ ವಾದ. ಆದರೆ ಈ ವಾದ, ಪಿಪಿಬಿ ಆರ್ಥಿಕ ಕ್ಷೇತ್ರದಲ್ಲಿನ ಉದ್ಯಮವಾಗಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಣಕಾಸು ವ್ಯವಸ್ಥೆಯಲ್ಲಿ ನಿಯಮಗಳು ಸಡಿಲವಾದರೆ ಅದರ ಪರಿಣಾಮಗಳೂ ಉತ್ತಮವಾಗಿರುವುದಿಲ್ಲ ಎಂಬುದನ್ನು ಹೀಗೆ ವಾದಿಸುವವರು ಮರೆತುಬಿಡುತ್ತಾರೆ. 1990ರ ದಶಕದ ಡಾಟ್‌ಕಾಮ್ ಗೀಳಿನಿಂದ 2008ರಲ್ಲಿ ಶುರುವಾದ ಆರ್ಥಿಕ ಬಿಕ್ಕಟ್ಟುಗಳವರೆಗೆ, 1990ರ ದಶಕ ಮತ್ತು 2000ದ ಆರಂಭ ಕಾಲದಲ್ಲಿನ ಸಹಾರಾ ಇಂಡಿಯಾದ ಏರುಗತಿಯಿಂದ ಹಿಡಿದು 2010ರ ದಶಕದಲ್ಲಿನ ಅನುತ್ಪಾದಕ ಸಾಲದ ಬಿಕ್ಕಟ್ಟಿನವರೆಗೆ ಇಂಥ ಪ್ರಕರಣಗಳು ವಿಭಿನ್ನವಾಗಿರಬಹುದು.

ಪಿಪಿಬಿ ಆ ಯಾವುದೇ ಹಣಕಾಸು ಸಂಸ್ಥೆಗಳಂತೆ ದೊಡ್ಡದಲ್ಲವಾದರೂ, ಅದು ಭಾರತದ ಹಣಕಾಸು ವ್ಯವಸ್ಥೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ವೈಯಕ್ತಿಕ ಮತ್ತು ಉದ್ಯಮಗಳ ಸಣ್ಣ ಹಣಕಾಸಿನ ವಹಿವಾಟುಗಳನ್ನು ನಡೆಸುವ ನೆಟ್‌ವರ್ಕ್ ಜೊತೆ ವ್ಯವಹಾರವಿರುವ ಹಿನ್ನೆಲೆಯಲ್ಲಿ ಅದು ಬಲವಾದ ನಿಯಮಗಳಿಗೆ ಒಳಪಡುವುದರ ಅಗತ್ಯ ಖಂಡಿತ ಇದೆ.

ಮೂರನೆಯದಾಗಿ,

ಆರ್‌ಬಿಐ ನಿರ್ಧಾರ ಪಿಪಿಬಿಯ ಶೇ.49ರಷ್ಟು ಶೇರನ್ನು ಹೊಂದಿರುವ ವನ್‌97 ಕಮ್ಯುನಿಕೇಷನ್ಸ್‌ನ ಷೇರು ಬೆಲೆಯ ಮೇಲೆ ಭಾರೀ ಪರಿಣಾಮ ಬೀರಿದೆ. ಜನವರಿ 31ರಿಂದ ಅದು ಶೇ.40ಕ್ಕಿಂತ ಹೆಚ್ಚು ಕುಸಿದಿದೆ. ಬಹಳ ಮುಖ್ಯವಾಗಿ, 2021ರ ನವೆಂಬರ್‌ನಲ್ಲಿದ್ದ ಅದರ ಮಾರಾಟ ಬೆಲೆ 2,150 ರೂ.ಗಿಂತಲೂ ಸುಮಾರು ಶೇ.79ರಷ್ಟು ಕಡಿಮೆಯಾಗಿದೆ. ವಾಸ್ತವವಾಗಿ, ವನ್ 97 ಕಮ್ಯುನಿಕೇಷನ್ಸ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ 10,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಹೂಡಿಕೆದಾರರು ಮಾರಾಟ ಮಾಡಿದ್ದಾರೆ. ಅಂದಿನಿಂದ ದೊಡ್ಡ ಪ್ರಮಾಣದಲ್ಲಿ ಅದರ ಮೌಲ್ಯ ಬಿದ್ದುಹೋಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಿಸೆಂಬರ್ ಅಂತ್ಯದವರೆಗೆ ಚಿಲ್ಲರೆ ಹೂಡಿಕೆದಾರರು ಕಂಪೆನಿಯ ಶೇ.12.85ರಷ್ಟು ಶೇರನ್ನು ಹೊಂದಿದ್ದರು. ಆದರೆ ಮ್ಯೂಚುವಲ್ ಫಂಡ್‌ಗಳು ಮತ್ತು ವಿಮಾ ಕಂಪೆನಿಗಳು ಹೊಂದಿರುವುದು ಒನ್‌97ರ ಶೇ.5.39ರಷ್ಟನ್ನು ಮಾತ್ರ.

ಹಾಗಾಗಿ, ಕೆಲವು ವರ್ಷಗಳಿಂದ ನಿಜವಾಗಿಯೂ ಏಳಿಗೆ ಕಾಣದ ಮತ್ತು ಸ್ಥಿರವಾದ ಲಾಭವನ್ನು ಗಳಿಸದ ವ್ಯಾಪಾರ ಮಾದರಿಗಳ ಒನ್‌97 ಕಮ್ಯುನಿಕೇಷನ್ಸ್‌ನಂತಹ ಕಂಪೆನಿಗಳನ್ನು ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲು ಅವಕಾಶ ಕೊಡಬೇಕೆ? ಅದರ ಐಪಿಒಗೆ ಮೊದಲು ಪ್ರಕಟಿಸಲಾದ ಕರಡು ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್‌ನಲ್ಲಿ ಹೇಳಲಾದ ಮೊದಲ ಅಪಾಯವೇ ಕಂಪೆನಿ ನಿವ್ವಳ ನಷ್ಟ ಹೊಂದುತ್ತ ಬಂದಿದ್ದು, ಲಾಭದಾಯಕತೆಯನ್ನು ಸಾಧಿಸಲು ಸಾಧ್ಯವಾಗದಿರಬಹುದು ಎಂಬುದು. ಈ ಸ್ಥಿತಿಯನ್ನು ತಜ್ಞರು ಕೇವಿಯಟ್ ಎಂಪ್ಟರ್ ಎನ್ನುತ್ತಾರೆ. ಅಂದರೆ ಕೊಂಡುಕೊಳ್ಳುವವರು ಹುಷಾರಾಗಿರಬೇಕು. ಏನೇ ಆದರೂ ಅವರೇ ಹೊಣೆಗಾರರು. ಹೂಡಿಕೆ ಬ್ಯಾಂಕ್‌ಗಳು, ಸ್ಟಾಕ್ ಬ್ರೋಕರೇಜ್‌ಗಳು, ಹಣಕಾಸು ಪ್ರಭಾವಿಗಳು, ವ್ಯಾಪಾರ ಮತ್ತು ಸಾಮಾಜಿಕ ಮಾಧ್ಯಮಗಳು ಮತ್ತು ತಮ್ಮನ್ನು ಪ್ರತ್ಯೇಕ ಬ್ರ್ಯಾಂಡ್‌ಗಳಾಗಿ ಪರಿವರ್ತಿಸಿಕೊಂಡಿರುವ ಸ್ಟಾರ್ಟಪ್ ಸಂಸ್ಥಾಪಕರ ನಡುವೆ ಸಿಲುಕಿರುವ ಚಿಲ್ಲರೆ ಹೂಡಿಕೆದಾರರಿಗೆ ಇರುವ ಅವಕಾಶವೇನು? ಅವರು ನಿಜವಾಗಿಯೂ ಹೂಡಿಕೆಗೆ ಮನಸ್ಸು ಮಾಡುತ್ತಾರೆಯೇ? ಇದು ಕೇಳಲೇಬೇಕಾದ ಪ್ರಶ್ನೆಯಾಗಿದೆ.

ಆರ್‌ಬಿಐ ನಿರ್ಬಂಧಗಳಿಂದಾಗಿ ಈ ಬ್ಯಾಂಕ್‌ನ ಗ್ರಾಹಕರಿಗೆ ತೊಂದರೆ ಆಗುವುದಂತೂ ಪಕ್ಕಾ. ಚಿಲ್ಲರೆ ವಹಿವಾಟುಗಳ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಬಳಸಿ ಹಣ ಪಾವತಿಸುವ ಸೌಲಭ್ಯ ಒದಗಿಸುವ ಕಂಪೆನಿಗಳ ಸಾಲಿನಲ್ಲಿ ಪೇಟಿಎಂಗೆ ದೊಡ್ಡ ಸ್ಥಾನವಿದೆ. ಆದರೆ ಈಗ ಅದು ಮಾಡಿಕೊಂಡಿರುವ ಯಡವಟ್ಟಿನಿಂದ ಹೊರಬರುವುದಕ್ಕೆ ದಾರಿ ಸುಲಭವಿಲ್ಲ.

ಫಿನ್‌ಟೆಕ್ ಕಂಪೆನಿಗಳಿಗೆ ನಿಯಮಗಳಿಂದ ವಿನಾಯಿತಿ ನೀಡಲು ಸಾಧ್ಯವಿಲ್ಲ. ನಿಯಮಗಳನ್ನು ಅನುಸರಿಸಬೇಕಿರುವುದು ಆ ಕಂಪೆನಿಗಳ ಜವಾಬ್ದಾರಿ ಎಂದು ಈಗಾಗಲೇ ಕೇಂದ್ರ ಸರಕಾರ ಹೇಳಿದೆ. ಫೆಬ್ರವರಿ ತಿಂಗಳ ಕೊನೆಯೊಳಗೆ ತನ್ನಲ್ಲಿರುವ ಖಾತೆಗಳನ್ನು ಬೇರೆಡೆ ವರ್ಗಾಯಿಸಬೇಕಾದ ಒತ್ತಡದಲ್ಲಿರುವ ಪೇಟಿಎಂ ಈಗ ಹತಾಶ ಸ್ಥಿತಿಯಲ್ಲಿದೆ. ಪೇಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಆರ್‌ಬಿಐ ಅಧಿಕಾರಿಗಳನ್ನು ಭೇಟಿ ಮಾಡಿದರೂ ಪ್ರಯೋಜನವಾಗಿಲ್ಲ. ನೆರವು ನೀಡಲು ಸರಕಾರವೂ ನಿರಾಕರಿಸಿದೆ, ಆರ್‌ಬಿಐ ಕೂಡ ನಿರಾಸಕ್ತಿ ತೋರಿದೆ. ಈಗ ಪಿಪಿಬಿಗೆ ಅಡಕತ್ತರಿಯಲ್ಲಿ ಸಿಕ್ಕಿದಂತಹ ಸ್ಥಿತಿ ಎದುರಾಗಿದೆ. ಈ ವಿಚಾರಕ್ಕೂ ಸರಕಾರಕ್ಕೂ ಸಂಬಂಧ ಇಲ್ಲ. ಸರಕಾರ ಏನೂ ಮಾಡಲು ಸಾಧ್ಯ ಇಲ್ಲ ಎಂದು ನಿರ್ಮಲಾ ಸೀತಾರಾಮನ್ ಹೇಳಿರುವುದಾಗಿ ವರದಿಯಾಗಿದೆ. ಆರ್‌ಬಿಐ ಕೂಡ ಪೇಟಿಎಂ ಮನವಿಯನ್ನು ಪುರಸ್ಕರಿಸಿಲ್ಲ. ಗಡುವು ವಿಸ್ತರಣೆಗೆ ಅದು ನಿರಾಕರಿಸಿದೆ. ಹಿಂದೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಿದ್ದರೂ ನಿರ್ಲಕ್ಷ್ಯ ವಹಿಸಿತ್ತೆಂಬ ಅಸಮಾಧಾನ ಆರ್‌ಬಿಐಗೆ ಇದ್ದೇ ಇರುತ್ತದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ಬೇರೆಡೆಗೆ ವರ್ಗಾಯಿಸುವುದು ಅಷ್ಟು ಕಷ್ಟವಾ ಎಂಬ ಪ್ರಶ್ನೆಯೊಂದು ಏಳುತ್ತದೆ. 3 ಕೋಟಿಗೂ ಅಧಿಕ ವರ್ತಕರು ಪೇಟಿಎಂ ಪ್ಲಾಟ್‌ಫಾರ್ಮ್‌ನಲ್ಲಿದ್ದಾರೆ. ಅದರಲ್ಲಿ ಶೇ.20ರಷ್ಟು ವರ್ತಕರು ಪಿಪಿಬಿ ಖಾತೆಯನ್ನು ಸೆಟಲ್ಮೆಂಟ್ ಅಕೌಂಟ್ ಆಗಿ ಬಳಸುತ್ತಾರೆ. ಅಂದರೆ ಸುಮಾರು 60 ಲಕ್ಷದಷ್ಟು ಅಕೌಂಟ್‌ಗಳು ಪಿಪಿಬಿಯಲ್ಲಿವೆ ಎನ್ನಲಾಗಿದೆ. ಅಷ್ಟೇ ಅಲ್ಲ, ಪೇಟಿಎಂ ಆ್ಯಪ್ ಯುಪಿಐ ಸೇವೆಗೂ ಕೂಡ ಪೇಟಿಎಂ ಪೇಮೆಂಟ್ಸ್ ಬ್ಯಾಂಕನ್ನೇ ಬಳಸಲಾಗುತ್ತಿದೆ. ಈ ಎಲ್ಲಾ ಖಾತೆಗಳನ್ನು ಫೆಬ್ರವರಿ 29ರೊಳಗೆ ಬೇರೆ ಬ್ಯಾಂಕುಗಳಿಗೆ ವರ್ಗಾವಣೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಈ 60 ಲಕ್ಷ ಖಾತೆಗಳನ್ನು ಬೇರೆ ಬ್ಯಾಂಕ್‌ಗೆ ವರ್ಗಾವಣೆ ಮಾಡಲು ದೊಡ್ಡ ತೊಡಕಿದೆ. ಅಷ್ಟೂ ಖಾತೆಗಳನ್ನು ಹಾಗೇ ವರ್ಗಾವಣೆ ಮಾಡಲು ಅಸಾಧ್ಯ. ಪೇಮೆಂಟ್ಸ್ ಬ್ಯಾಂಕ್ ತನ್ನ ಖಾತೆಗಳನ್ನು ವಿತರಿಸುವಾಗ ಸರಿಯಾಗಿ ಕೆವೈಸಿ ನಿಯಮ ಪಾಲಿಸಿಲ್ಲವೆನ್ನಲಾಗಿದ್ದು, ಈಗ ಬೇರೆ ಬ್ಯಾಂಕುಗಳು ಈ ಖಾತೆಗಳನ್ನು ಪಡೆಯುವಾಗ ಹೊಸದಾಗಿ ಕೆವೈಸಿ ಪಡೆಯಲೇಬೇಕು. ಫೆಬ್ರವರಿ 29ರೊಳಗೆ ಈ ಕೆಲಸ ಬಹುತೇಕ ಕಷ್ಟಸಾಧ್ಯ. ಹೀಗಾಗಿ, ಯಾವ ಬ್ಯಾಂಕ್ ಕೂಡ ಪೇಟಿಎಂನೊಂದಿಗೆ ಈ ವಿಚಾರದಲ್ಲಿ ಸಂಯೋಜನೆಗೆ ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ. ಗಡುವು ವಿಸ್ತರಣೆಯೊಂದೇ ಇದಕ್ಕೆ ದಾರಿಯಾದರೂ, ಆರ್‌ಬಿಐ ಮಾತ್ರ ಖಡಾಖಂಡಿತವಾಗಿ ನಿರಾಕರಿಸಿರುವುದು ಪಿಪಿಬಿಯನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ.

ಈ ನಡುವೆ ಪೇಟಿಎಂ ವ್ಯಾಲೆಟ್ ಸೇವೆಯನ್ನು ಖರೀದಿಸಲು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ ಮುಂದಾಗಿದೆ ಎಂಬ ಸುದ್ದಿಗಳೂ ಇವೆ. ಆದರೆ ಅಂಥ ಯಾವುದೇ ಮಾತುಕತೆ ನಡೆದಿಲ್ಲ ಎಂದು ಜಿಯೋ ಫೈನಾನ್ಸ್ ಹೇಳಿದೆ. ಮತ್ತೊಂದೆಡೆ ಪೇಟಿಎಂ ಬದಲು ಬೇರೆ ಪೇಮೆಂಟ್ ಆ್ಯಪ್‌ಗಳನ್ನು ಬಳಸಲು ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ ಅಖಿಲ ಭಾರತ ಈಗಾಗಲೇ ವ್ಯಾಪಾರಸ್ಥರಿಗೆ ಸಲಹೆ ನೀಡಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕನ್ನು ಹೆಚ್ಚಾಗಿ ಬಳಸುವವರು ಸಣ್ಣ ವರಮಾನ ಹೊಂದಿರುವವರು. ಇವರಲ್ಲಿ ಸಮಾಜದ ಎಲ್ಲಾ ವರ್ಗಗಳಿಗೆ ಸೇರಿದವರೂ ಇದ್ದಾರೆ. ಆರ್‌ಬಿಐ ನಿರ್ಬಂಧದ ಹಿನ್ನೆಲೆಯಲ್ಲಿ ಈಗ ಮೊದಲು ತಾಪತ್ರಯ ಎದುರಿಸುವವರೇ ಅವರು. ಈ ದೇಶದಲ್ಲಿ ಎಲ್ಲ ಪ್ರಮಾದಗಳ ಮೊದಲು ಬಲಿಪಶುಗಳೇ ಜನಸಾಮಾನ್ಯರು ಎಂಬುದು ಪೇಟಿಎಂ ವಿಚಾರದಲ್ಲಿಯೂ ಮತ್ತೊಮ್ಮೆ ಸಾಬೀತಾಗಿದೆ.

ಗ್ರಾಹಕರ ಮೇಲೆ ಉಂಟಾಗುವ ಪರಿಣಾಮಗಳು

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರವರಿ 29ರ ನಂತರ ಠೇವಣಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ, ವ್ಯಾಲೆಟ್‌ಗಳು ಸೇರಿದಂತೆ ಕ್ರೆಡಿಟ್ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಅಂದರೆ, ಬ್ಯಾಂಕ್ ತನ್ನ ಖಾತೆಗಳು ಅಥವಾ ವ್ಯಾಲೆಟ್‌ಗಳ ಮೂಲಕ ಗ್ರಾಹಕರಿಗೆ ಸಾಲದ ಹಣವನ್ನು ಕ್ರೆಡಿಟ್ ಮಾಡಲು ಸಾಧ್ಯವಾಗುವುದಿಲ್ಲ.

ಆದರೆ, ಗ್ರಾಹಕರು ತಮ್ಮ ಖಾತೆಯಲ್ಲಿ ಇನ್ನೂ ಉಳಿದಿರುವ ಬಾಕಿಗಳನ್ನು ನಿರ್ಬಂಧಗಳಿಲ್ಲದೆ ಹಿಂಪಡೆಯಬಹುದು ಅಥವಾ ಬಳಸಿಕೊಳ್ಳಬಹುದು.

ಆರ್‌ಬಿಐ ಹೇರಿರುವ ಈ ನಿರ್ಬಂಧದಂತೆ, ಯುಪಿಐ ಸೇರಿದಂತೆ ಹಣ ವರ್ಗಾವಣೆಯನ್ನು ನೀಡಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಅವಕಾಶವಿಲ್ಲ. ಹಾಗಾಗಿ ಯಾರಾದರೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿನ ಬ್ಯಾಲೆನ್ಸ್ ಅನ್ನು ಯುಪಿಐ ಮೂಲಕ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

ಪೇಟಿಎಂನ ವ್ಯಾಲೆಟ್ ಅಪ್ಲಿಕೇಶನ್ ಮತ್ತು ಇತರ ಬ್ಯಾಂಕ್‌ಗಳ ಖಾತೆಗಳಿಗೆ ಲಿಂಕ್ ಮಾಡಲಾದ ಯುಪಿಐ ಸೇವೆಗಳಿಗೆ ಯಾವುದೇ ತೊಂದರೆಯಿಲ್ಲ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ಸೇವೆಗಳನ್ನು ಮಾತ್ರ ಬಳಸಲು ಆಗುವುದಿಲ್ಲ.

ರಸ್ತೆ ಟೋಲ್‌ಗಳನ್ನು ಪಾವತಿಸಲು ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಕಾರ್ಡ್‌ಗಳನ್ನು ಟಾಪ್ ಅಪ್ ಮಾಡುವಂತಹ ಚಟುವಟಿಕೆಗಳಿಗೂ ಅವಕಾಶವಿಲ್ಲವಾಗಿದೆ.

ಬ್ಯಾಂಕ್, ಆದಾಗ್ಯೂ, ಗ್ರಾಹಕರ ಖಾತೆಗಳಲ್ಲಿ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಯನ್ನು ಕ್ರೆಡಿಟ್ ಮಾಡಬಹುದು.

ಉಳಿತಾಯ ಬ್ಯಾಂಕ್ ಖಾತೆಗಳು, ಕರೆಂಟ್ ಅಕೌಂಟ್‌ಗಳು, ಪ್ರಿಪೇಯ್ಡ್ ಉಪಕರಣಗಳು, ಫಾಸ್ಟ್ ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು ಸೇರಿದಂತೆ ತಮ್ಮ ಖಾತೆಗಳಿಂದ ಬ್ಯಾಲೆನ್ಸ್‌ಗಳನ್ನು ಹಿಂಪಡೆಯಲು ಅಥವಾ ಬಳಸಿಕೊಳ್ಳಲು ಗ್ರಾಹಕರಿಗೆ ಯಾವುದೇ ನಿರ್ಬಂಧಗಳಿಲ್ಲ. ಅವರ ಬಾಕಿ ಹಣ ಹಿಂದೆಗೆದುಕೊಳ್ಳುವವರೆಗೆ ಅಥವಾ ಬಳಸಿಕೊಳ್ಳುವವರೆಗೂ ಈ ಅವಕಾಶ ಇರುತ್ತದೆ.

ಅಂದರೆ, ಗ್ರಾಹಕರು ಈ ಸೇವೆಗಳನ್ನು ಹೊಸದಾಗಿ ಹಣ ಹಾಕಿ ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಈಗಿರುವ ಬ್ಯಾಲನ್ಸ್ ಬಳಸುವುದಕ್ಕಷ್ಟೇ ಅವಕಾಶವಿದೆ.

LEAVE A REPLY

Please enter your comment!
Please enter your name here