Home Uncategorized ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಪಿಎಸ್‌ಐ ಮರುಪರೀಕ್ಷೆ

ಪೊಲೀಸ್ ಬಿಗಿ ಭದ್ರತೆಯಲ್ಲಿ ನಡೆದ ಪಿಎಸ್‌ಐ ಮರುಪರೀಕ್ಷೆ

22
0

ಬೆಂಗಳೂರು: ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ನಗರದ 117 ಕೇಂದ್ರಗಳಲ್ಲಿ ಮಂಗಳವಾರ ಪೊಲೀಸ್ ಬಿಗಿ ಭದ್ರತೆಯಲ್ಲಿ ಮರುಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ಈ ಹಿಂದೆ 2021ರ ಅಕ್ಟೋಬರ್ 23ರಂದು ನಡೆದಿದ್ದ ಪರೀಕ್ಷೆಗೆ ಹಾಜರಾಗಿದ್ದ 54 ಸಾವಿರ ಅಭ್ಯರ್ಥಿಗಳಿಗೆ ಮಾತ್ರ ಲಿಖಿತ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದಲೂ ಅಭ್ಯರ್ಥಿಗಳು ಬೆಂಗಳೂರಿಗೆ ಆಗಮಿಸಿ ಪರೀಕ್ಷೆ ಬರೆದರು. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಲಿಖಿತ ಮರುಪರೀಕ್ಷೆಯ ಹೊಣೆಗಾರಿಕೆಯನ್ನು ಒಪ್ಪಿಸಿತ್ತು.

ಹಿಂದಿನಂತೆ ಯಾವುದೇ ಅಕ್ರಮ, ಅವ್ಯವಹಾರ ಚಟುವಟಿಕೆಗಳು ನಡೆಯದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜ.23ರ ಬೆಳಗ್ಗೆ 7 ಗಂಟೆಯಿಂದ ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲಾಗಿತ್ತು. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಆರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. 40ಕ್ಕೂ ಹೆಚ್ಚು ಕೆಎಸ್‍ಆರ್ ಪಿ ಮತ್ತು ಸಿಎಆರ್ ಬೆಟಾಲಿಯನ್‍ನ ಪೊಲೀಸ್ ಸಿಬ್ಬಂದಿಗಳು ಪರೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಮಫ್ತಿಯಲ್ಲೂ ಪೊಲೀಸರು ಗಸ್ತಿನಲ್ಲಿದ್ದರು.

ನಗರದಲ್ಲಿ ಅನುಮಾನಸ್ಪದವಾಗಿ ಓಡಾಡುವರು, ಗಾಳಿಸುದ್ಧಿ ಹಬ್ಬಿಸುವ ಕಿಡಿಗೇಡಿಗಳು, ಜೆರಾಕ್ಸ್ ಹಾಗೂ ಸೈಬರ್ ಕೇಂದ್ರಗಳ ಮೇಲೆ ನಿಗಾ ಇರಿಸಲಾಗಿತ್ತು. ಲೋಹ ಶೋಧಕ ಯಂತ್ರದ ಮೂಲಕ ಪ್ರತಿ ಅಭ್ಯರ್ಥಿಯನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗಿತ್ತು. ಮೊಬೈಲ್, ಬ್ಲೂಟೂತ್, ಸ್ಮಾರ್ಟ್‍ವಾಚ್ ಸೇರಿದಂತೆ ಎಲೆಕ್ಟ್ರಾನಿಕ್ ಡಿವೈಜ್‍ಗಳನ್ನು ಪರೀಕ್ಷಾ ಕೇಂದ್ರದ ಒಳಗೆ ತರದಂತೆ ನಿರ್ಬಂಧಿಸಲಾಗಿತ್ತು.

ನಿರ್ದಿಷ್ಠವಾದ ವಸ್ತ್ರಸಂಹಿತೆಯನ್ನು ಜಾರಿ ಮಾಡಲಾಗಿತ್ತು. ಹೆಣ್ಣು ಮಕ್ಕಳಿಗೆ ತಾಳಿ ಮತ್ತು ಅದರೊಂದಿಗಿನ ಸರ ಹೊರತುಪಡಿಸಿ ಅನಗತ್ಯವಾದ ಆಭರಣಗಳಿಗೆ ಅವಕಾಶ ನಿರಾಕರಿಸಲಾಗಿತ್ತು. ಬೆಳಗ್ಗೆ 8.30ಕ್ಕೆ ಪರೀಕ್ಷಾ ಕೇಂದ್ರದಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಿ ತಪಾಸಣೆಗೆ 2 ಗಂಟೆ ಸಮಯ ಲಭ್ಯವಿದ್ದು, ಬಹುತೇಕ ಅಭ್ಯರ್ಥಿಗಳು ಮುಂಚಿತವಾಗಿಯೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು.

ಹಲವು ಹಂತಗಳ ತಪಾಸಣೆ ಬಳಿಕ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪಡೆದ ಅಭ್ಯರ್ಥಿಗಳು ಸಿಸಿ ಟಿವಿ ಮತ್ತು ಪರೀಕ್ಷಾ ಮೇಲ್ವಿಚಾರಕರ ಕಣ್ಗಾವಲಿನಲ್ಲಿ ಮರುಪರೀಕ್ಷೆಯನ್ನು ಎದುರಿಸಿದರು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here