ಬೆಂಗಳೂರು: ಪೌರಾಣಿಕ ಮತ್ತು ಪಂಚತಂತ್ರ ಕಥೆಗಳು ರಾಷ್ಟ್ರೀಯ ಕಲಾಶಿಬಿರದಲ್ಲಿ ಹೊಸ ದೃಶ್ಯರೂಪ ಪಡೆಯುತ್ತಿವೆ. ಇಲ್ಲಿ ಯುವ ಕಲಾವಿದರು ವಿವಿಧ ಭಾರತೀಯ ಸಾಂಪ್ರದಾಯಿಕ ಕಲಾರೂಪಗಳ ಮೂಲಕ ಈ ಪ್ರಾಚೀನ ನೀತಿಕಥೆಗಳನ್ನು ಪುನರ್ಕಲ್ಪನೆ ಮಾಡುತ್ತಾ, ವಂಶಪಾರಂಪರ್ಯವಾಗಿ ಈ ಕಲೆಯನ್ನು ಅಭ್ಯಸಿಸುತ್ತಿರುವ ಕಲಾವಿದರಿಂದ ನೇರವಾಗಿ ಕಲಿಯುತ್ತಿದ್ದಾರೆ.
ಬೆಂಗಳೂರು ಮೂಲದ ಯುವಕ ಸಂಘವು ತನ್ನ ಆರ್ಟ್ ಮ್ಯಾಟರ್ಸ್ ವೇದಿಕೆಯಡಿ, ಶಿಕ್ಷಣ ಸಚಿವಾಲಯದ ಭಾರತೀಯ ಜ್ಞಾನ ವ್ಯವಸ್ಥೆ (Indian Knowledge Systems) ವಿಭಾಗದ ಸಹಯೋಗದಲ್ಲಿ ಈ ಶಿಬಿರವನ್ನು ಆಯೋಜಿಸಿದೆ.
17 ರಾಜ್ಯಗಳಿಂದ 400 ಫೈನ್ ಆರ್ಟ್ಸ್ ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಅರ್ಜಿದಾರರಿಂದ ಆಯ್ಕೆಯಾದ ವಿದ್ಯಾರ್ಥಿಗಳು, ಮೈಸೂರು ಚಿತ್ರಕಲೆ, ಕಲಂಕಾರಿ, ಕೇರಳ ಮ್ಯೂರಲ್, ತಂಜಾವೂರು ಮ್ಯೂರಲ್, ಚಿತ್ರಕಥಿ, ಪಟ್ಟಚಿತ್ರ, ಗೋಂಡ್ ಕಲೆ, ಮಾತಾ ನಿ ಪಚ್ಚೇಡಿ ಮತ್ತು ಮಧುಬನಿ ಸೇರಿದಂತೆ ಹತ್ತು ಸಾಂಪ್ರದಾಯಿಕ ಶೈಲಿಗಳಲ್ಲಿ 84 ಪಂಚತಂತ್ರ ಕಥೆಗಳನ್ನು ಚಿತ್ರಿಸುತ್ತಿದ್ದಾರೆ.
ಬುದ್ಧಿವಂತಿಕೆ, ಸ್ನೇಹ, ಧೈರ್ಯ ಮತ್ತು ನೈತಿಕ ನಿರ್ಧಾರಗಳಂತಹ ಮೌಲ್ಯಗಳನ್ನು ಪ್ರಾಣಿಗಳ ಕಥೆಗಳ ಮೂಲಕ ಹೇಳುವ ಸಾಮರ್ಥ್ಯ ಮತ್ತು ಅದರ ಪ್ರಸ್ತುತತೆಯ ಕಾರಣದಿಂದ ಪಂಚತಂತ್ರ ಕಥೆಗಳನ್ನು ಆಯ್ಕೆ ಮಾಡಲಾಗಿದೆ. ಒಂದೇ ಕಥೆಗಳನ್ನು ವಿಭಿನ್ನ ಪ್ರಾದೇಶಿಕ ಶೈಲಿಗಳಲ್ಲಿ ಚಿತ್ರಿಸುವುದರಿಂದ, ಕಥೆಯ ಮೂಲ ಅರ್ಥ ಅಚಲವಾಗಿರುವಾಗ ದೃಶ್ಯ ಭಾಷೆ ಭೌಗೋಳಿಕತೆಯ ಪ್ರಕಾರ ಹೇಗೆ ಬದಲಾಗುತ್ತದೆ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬಹುದು. ಈ ಉಪಕ್ರಮವು ವಿದ್ಯಾರ್ಥಿಗಳು ಮತ್ತು ಶಾಲೆಗಳಲ್ಲಿ ಭಾರತೀಯ ದೃಶ್ಯ ಉಲ್ಲೇಖಗಳ ಕೊರತೆಯನ್ನು ನಿವಾರಿಸಲು ಉದ್ದೇಶಿಸಿದೆ.
ವಿದ್ಯಾರ್ಥಿಗಳಿಗೆ ಒಂದೊಂದು ಕಲಾರೂಪವನ್ನು ಹಂಚಲಾಗಿದ್ದು, ಪೀಳಿಗೆಯಿಂದ ಪೀಳಿಗೆ ಈ ಪರಂಪರೆಯನ್ನು ಮುಂದುವರಿಸಿಕೊಂಡು ಬಂದ ಹಿರಿಯ ಸಾಂಪ್ರದಾಯಿಕ ಕಲಾವಿದರು ಮಾರ್ಗದರ್ಶನ ನೀಡುತ್ತಿದ್ದಾರೆ. ಕಥೆ ಹೇಳುವಿಕೆ ಮತ್ತು ರೇಖಾಚಿತ್ರ ತರಗತಿಗಳಿಂದ ಆರಂಭವಾಗಿ, ನಂತರ ಕ್ಯಾನ್ವಾಸ್ ಮೇಲೆ ರೂಪಿಸಲಾಗುತ್ತದೆ. ಸುಮಾರು 840 ಕಲಾಕೃತಿಗಳು ಪೂರ್ಣಗೊಳ್ಳಲಿದ್ದು, ಪ್ರಾದೇಶಿಕ ಸೌಂದರ್ಯ ಮತ್ತು ಐಕಾನೋಗ್ರಾಫಿಕ್ ನಿಖರತೆಗೆ ವಿಶೇಷ ಒತ್ತು ನೀಡಲಾಗಿದೆ.
ಆರ್ಟ್ ಮ್ಯಾಟರ್ಸ್ನ ಮಾರ್ಗದರ್ಶಕ ಹಾಗೂ ಪ್ರಭಾರಿ ಶಿವಪ್ರಸಾದ್ ಅವರು, ಈ ಪ್ರಯತ್ನವು ಸಾಂಪ್ರದಾಯಿಕ ದೃಶ್ಯ ಕಲಾರೂಪಗಳನ್ನು ಯುವ ಕಲಿಕಾರ್ಥಿಗಳಿಗೆ ಹೆಚ್ಚು ಸುಲಭವಾಗಿ ತಲುಪುವಂತೆ ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಮಕ್ಕಳು ಚಿತ್ರಗಳನ್ನು ಹುಡುಕುವಾಗ, ಬಹುತೇಕ ಸಂದರ್ಭ ಭಾರತದ ಹೊರಗಿನ ವಿಷಯಗಳನ್ನು ನೋಡುತ್ತಾರೆ. ಈ ಯೋಜನೆಯ ಮೂಲಕ ನಮ್ಮದೇ ಕಥೆಗಳು ಮತ್ತು ಕಲಾ ಪರಂಪರೆಗಳಿಗೆ ಆಧಾರವಾದ ಒಂದು ಸಂಗ್ರಹವನ್ನು ನಾವು ಸೃಷ್ಟಿಸುತ್ತಿದ್ದೇವೆ ಎಂದು ಹೇಳಿದರು.
ಈ ಶಿಬಿರವು ತಾಂತ್ರಿಕ ಕಲಿಕೆ ಮತ್ತು ಕಲಾತ್ಮಕ ವಿನಿಮಯ ಎರಡಕ್ಕೂ ಅವಕಾಶ ನೀಡಿದ ವೇದಿಕೆಯಾಗಿದೆ. ಇಂದೋರ್ನ ರಹಿನಿ ಕಾಲೇಜ್ ಆಫ್ ಆರ್ಟ್ ಅಂಡ್ ಡಿಸೈನ್ನಲ್ಲಿ ಚಿತ್ರಕಲೆಯ ಮೊದಲ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯಾಗಿರುವ ಭೂಪೇಂದ್ರ ಸಿಂಗ್ ಚೌಹಾನ್, ಈ ಸಾಂಪ್ರದಾಯಿಕ ಕಲಾ ವಿಧಾನಗಳೊಳಗಿನ ವೈಶಿಷ್ಟ್ಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಮತ್ತು ಪ್ರಾದೇಶಿಕ ತಂತ್ರಗಳ ಬಗ್ಗೆ ತಮ್ಮ ತಿಳುವಳಿಕೆ ಆಳಪಡಿಸಲು ಸಹಾಯ ಮಾಡಿದೆ ಎಂದು ಹೇಳಿದರು.
ಸೀಮಿತ ಅವಧಿಯಲ್ಲಿಯೇ ಮಾರ್ಗದರ್ಶಕರ ಪ್ರದರ್ಶನಗಳು ಸಾಮಾನ್ಯವಾಗಿ ಒಂದು ಕಲಾಕೃತಿಗೆ 15 ರಿಂದ 20 ದಿನಗಳು ಬೇಕಾಗುವ ಪ್ರಕ್ರಿಯೆಗಳ ಬಗ್ಗೆ ಒಳನೋಟ ನೀಡಿವೆ. ಭಾರತದ ವಿವಿಧ ಭಾಗಗಳ ಕಲಾವಿದರೊಂದಿಗೆ ಕೆಲಸ ಮಾಡುವುದು, ತಂತ್ರಗಳನ್ನು ಹಂಚಿಕೊಳ್ಳುವುದು ಮತ್ತು ಅವರ ವಿಧಾನಗಳ ಬಗ್ಗೆ ತಿಳಿಯುವುದು ಬಹಳ ಸಹಾಯಕವಾಗಿದೆ. ಇಂತಹ ಶಿಬಿರಗಳು ನಮ್ಮನ್ನು ಕಲಾವಿದರಾಗಿ ಬೆಳೆಯಲು ಮತ್ತು ಪರಸ್ಪರ ಸಂಪರ್ಕ ಸಾಧಿಸಲು ನೆರವಾಗುತ್ತವೆ ಎಂದು ಹೇಳಿದರು.
ಫೆಬ್ರವರಿ 13ರಂದು ಆರಂಭಗೊಂಡಿದ್ದು 27ರವರೆಗೆ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ. ಡಿಜಿಟಲೀಕರಣದ ನಂತರ, ಈ ಕಲಾಕೃತಿಗಳನ್ನು ದೇಶದಾದ್ಯಂತ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ ಪ್ರದರ್ಶನಕ್ಕಾಗಿ ಮುದ್ರಿಸಿ ಬಳಕೆ ಮಾಡಲಾಗುತ್ತದೆ.
