Home Uncategorized ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಶೂಟರ್ ವಿಜಯವೀರ್ ಸಿಧು

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಶೂಟರ್ ವಿಜಯವೀರ್ ಸಿಧು

31
0

ಹೊಸದಿಲ್ಲಿ : ಭಾರತದ ವಿಜಯವೀರ್ ಸಿಧು ಜಕಾರ್ತದಲ್ಲಿ ಶನಿವಾರ ನಡೆದ ಏಶ್ಯನ್ ಒಲಿಂಪಿಕ್ಸ್ ಕ್ವಾಲಿಫೈಯರ್ಸ್ ನಲ್ಲಿ ಪುರುಷರ 25 ಮೀ. ರ್ಯಾಪಿಡ್ ಫೈಯರ್ ಸ್ಫರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ್ದು ಈ ಮೂಲಕ ಮುಂಬರುವ ಪ್ಯಾರಿಸ್ ಒಲಿಂಪಿಕ್ ಗೇಮ್ಸ್ನಲ್ಲಿ ಅರ್ಹತೆ ಗಿಟ್ಟಿಸಿಕೊಂಡ ತನ್ನ ದೇಶದ 17ನೇ ಶೂಟರ್ ಎನಿಸಿಕೊಂಡರು.

ಕಳೆದ ವರ್ಷ ಹಾಂಗ್ಝೌ ಗೇಮ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ 21ರ ಹರೆಯದ ವಿಜಯವೀರ್ 25 ಮೀ. ರ್ಯಾಪಿಡ್ ಫೈಯರ್ಸ್ನಲ್ಲಿ ಪ್ಯಾರಿಸ್ ಗೇಮ್ಸ್ ಗೆ ತೇರ್ಗಡೆಯಾಗಿರುವ ತನ್ನದೇ ದೇಶದ ಅನಿಶ್ ಭಾನ್ವಾಲಾರನ್ನು ಸೇರಿಕೊಂಡರು.

ಅನಿಶ್ ಕಳೆದ ವರ್ಷ ಕೊರಿಯಾದ ಚಾಂಗ್ವಾನ್ನಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಜಯಿಸುವ ಮೂಲಕ ಒಲಿಂಪಿಕ್ಸ್ ಕೋಟಾ ಪಡೆದಿದ್ದರು.

ವಿಜಯವೀರ್ 577 ಅಂಕ ಗಳಿಸಿ ನಾಲ್ಕನೇ ಸ್ಥಾನದೊಂದಿಗೆ ಫೈನಲ್ ಗೆ ಅರ್ಹತೆ ಪಡೆದ ಬೆನ್ನಿಗೆ ಒಲಿಂಪಿಕ್ಸ್ ಕೋಟಾ ಖಚಿತಪಡಿಸಿದ್ದರು.

ಫೈನಲ್ ಕಣದಲ್ಲಿರುವ ಆರು ಶೂಟರ್ಗಳ ಪೈಕಿ ನಾಲ್ವರು ಕೋಟಾ ಸ್ಥಾನಕ್ಕೆ ಅರ್ಹರಿದ್ದಾರೆ. ವಿಜಯವೀರ್ ಎಲಿಮಿನೇಶನ್ ಸುತ್ತಿನಲ್ಲಿ 28 ಅಂಕ ಗಳಿಸಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿ ಬೆಳ್ಳಿ ಜಯಿಸಿದರು. ಕಝಕ್ಸ್ತಾನದ ನಿಕಿತಾ ಚಿರುಕಿನ್ 32 ಅಂಕ ಗಳಿಸಿ ಚಿನ್ನ ಗೆದ್ದುಕೊಂಡರು.

ರ್ಯಾಪಿಡ್ ಫೈಯರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಸಾಂಪ್ರದಾಯಿಕವಾಗಿ ಭಾರತ ಬಲಿಷ್ಠವಾಗಿದ್ದು, ವಿಜಯಕುಮಾರ್ 2012ರ ಲಂಡನ್ ಒಲಿಂಪಿಕ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ವಿಜಯವೀರ್ ಹಾಗೂ ಅನಿಶ್ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದು, ರ್ಯಾಪಿಡ್ ಫೈಯರ್ ಶೂಟಿಂಗ್ ವಿಭಾಗದಲ್ಲಿ ಇದೇ ಮೊದಲ ಬಾರಿ ಭಾರತದ ಇಬ್ಬರು ಶೂಟರ್ಗಳು ಅರ್ಹತೆ ಪಡೆದಿದ್ದಾರೆ.

ಭಾರತೀಯ ಶೂಟರ್ಗಳು ಇಂಡೋನೇಶ್ಯದ ಜಕಾರ್ತದಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಗಾಗಿ ನಾಲ್ಕು ಕೋಟಾ ಸ್ಥಾನಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಇಶಾ ಸಿಂಗ್(ಮಹಿಳೆಯರ 10 ಮೀ. ಏರ್ ಪಿಸ್ತೂಲ್), ವರುಣ್ ತೋಮರ್(ಪುರುಷರ 10 ಮೀ. ಏರ್ ಪಿಸ್ತೂಲ್), ರಿದಮ್ ಸಾಂಗ್ವಾನ್(ಮಹಿಳೆಯರ 25 ಮೀ. ಸ್ಪೋರ್ಟ್ಸ್ ಪಿಸ್ತೂಲ್) ಹಾಗೂ ವಿಜಯವೀರ್ ಸಿಧು ಅರ್ಹತಾ ಪಟ್ಟಿಗೆ ಸೇರಿದ್ದಾರೆ.

LEAVE A REPLY

Please enter your comment!
Please enter your name here