Home ಕರ್ನಾಟಕ ಪ್ರಜಾಪ್ರಭುತ್ವ ಉಳಿಯಬೇಕಾದರೆ ‘ಇಂಡಿಯಾ ಒಕ್ಕೂಟ’ಕ್ಕೆ ಯಶಸ್ಸು ಸಿಗಬೇಕು : ಸುಧೀಂದ್ರ ಕುಲಕರ್ಣಿ

ಪ್ರಜಾಪ್ರಭುತ್ವ ಉಳಿಯಬೇಕಾದರೆ ‘ಇಂಡಿಯಾ ಒಕ್ಕೂಟ’ಕ್ಕೆ ಯಶಸ್ಸು ಸಿಗಬೇಕು : ಸುಧೀಂದ್ರ ಕುಲಕರ್ಣಿ

38
0

ಬೆಂಗಳೂರು:  ದೇಶವು  ಅಘೋಷಿತ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಪ್ರಜಾಪ್ರಭುತ್ವವನ್ನು ನಾಶ ಮಾಡುವ ಕೆಲಸ ಬಿಜೆಪಿ ಇಂದು ಮಾಡುತ್ತಿದೆ. ಹೀಗಾಗಿ ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ‘ಇಂಡಿಯಾ ಒಕ್ಕೂಟ’ಕ್ಕೆ ಯಶಸ್ಸು ಸಿಗಬೇಕು ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ತಿಳಿಸಿದ್ದಾರೆ. 

ಗುರುವಾರ ಇಲ್ಲಿನ ಗಾಂಧಿ ಭವನದಲ್ಲಿ ಸೃಷ್ಟಿ ಪಬ್ಲಿಕೇಶನ್ ವತಿಯಿಂದ ಆಯೋಜಿಸಿದ್ದ ಡಾ. ಪರಕಾಲ ಪ್ರಭಾಕರ್ ರ ‘ ದಿ ಕ್ರೂಕುಡ್ ಟಿಂಬರ್ ಆಫ್ ನ್ಯೂ ಇಂಡಿಯಾ’ ಕೃತಿಯ ಕನ್ನಡ ಅವತರಣಿಕೆಯಾದ ರಾಹು (ಆರ್.ಕೆ. ಹುಡುಗಿ) ಅನುವಾದಿಸಿದ ‘ ಎಡವಾಗುತ್ತಿರುವ ಗಣರಾಜ್ಯ’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ದೇಶದಲ್ಲಿ ಈವರೆಗೂ 17 ಲೋಕಸಭಾ ಚುನಾವಣೆಗಳು ನಡೆದಿದೆ. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿದರೆ ಉಳಿದ ಯಾವ ಸಂದರ್ಭದಲ್ಲಿಯೂ ಗಣತಂತ್ರ ವ್ಯವಸ್ಥೆ ಇಷ್ಟೊಂದು ಅಪಾಯಕಾರಿ ಸ್ಥಿತಿಯಲ್ಲಿ ಇರಲಿಲ್ಲ. 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಭಾರತದ ಗಣತಂತ್ರ ವ್ಯವಸ್ಥೆ ಉಳಿಯುತ್ತದೆ ಇಲ್ಲವೋ ಎಂದು ಆತಂಕದಲ್ಲಿದ್ದೆವು. ಈಗ ನಾವು ಅದೇ ಸ್ಥಿತಿಯಲ್ಲಿದ್ದೇವೆ. ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸದೆ ನರೇಂದ್ರ ಮೋದಿ ತುರ್ತು ಪರಿಸ್ಥಿತಿಯನ್ನು ತಂದಿಟ್ಟಿದ್ದಾರೆ ಎಂದು ಅವರು ತಿಳಿಸಿದರು. 

ಕಳೆದ ಹತ್ತು ವರ್ಷಗಳಲ್ಲಿ ವಿಕಸಿತ್ ಭಾರತ್ ಎನ್ನುತ್ತಾರೆ. ಪ್ರಜಾಪ್ರಭುತ್ವನ್ನು ಹತ್ತಿಕ್ಕಿದ್ದಾರೆ. ಇಂದು ಪಾರ್ಲಿಮೆಂಟ್ ಚುನಾವಣೆಯಾಗುತ್ತದೆ. ಆದರೆ ಪಾರ್ಲಿಮೆಂಟ್ ಗೆ  ಯಾವುದೇ ಮೌಲ್ಯ ಇಲ್ಲವಾಗಿದೆ. ಪಾರ್ಲಿಮೆಂಟ್ ನಲ್ಲಿ ಯಾವುದೇ ಚರ್ಚೆಯಾಗುತ್ತಿಲ್ಲ, ವಿರೋಧಿ ಪಕ್ಷಗಳ ಮಾತುಗಳನ್ನು ಕೇಳುತ್ತಿಲ್ಲ. 150 ಲೋಕಸಭಾ ಸದಸ್ಯರನ್ನು ಅಮಾನತು ಮಾಡಲಾಗಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದರು.  

ವಿರೋಧಿ ಪಕ್ಷಗಳ ರಾಜ್ಯ ಸರಕಾರವನ್ನು ಹೇಗೆ ಉರುಳಿಸುತ್ತಾರೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಶಾಸಕರನ್ನು ಗುಹಾಹಟಿಗೆ ಕರೆದುಕೊಂಡು ಹೋಗಿ ಸರಕಾರವನ್ನು ಉರುಳಿಸಿದರು. ಇದು ಪ್ರಜಾಪ್ರಭುತ್ವವೇ ಎಂದು ಅವರು ಪ್ರಶ್ನಿಸಿದರು.

ಇಂದಿರಾಗಾಂಧಿಯವರಾಗಲೀ, ಜೆಪಿ, ವಾಜಪೇಯಿ ಅಡ್ವಾಣಿ ಸೇರಿ ಯಾವುದೇ ವಿರೋಧಿಗಳನ್ನು ದೇಶದ್ರೋಹಿ ಎನ್ನಲಿಲ್ಲ. ಆದರೆ ಇಂದು ತಮ್ಮನ್ನು ವಿರೋಧಿಸುವವರನ್ನು ಕೇಂದ್ರ ಸರಕಾರವೇ ದೇಶದ್ರೋಹಿ ಎಂದು ಕರೆಯುತ್ತಿದೆ.  ಈಡಿ, ಸಿಬಿಐಗಳ ದುರುಪಯೋಗ. ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಚುನಾವಣೆ ವೇಳೆ ಜೈಲಿನಲ್ಲಿದ್ದಾರೆ. ಈ ರೀತಿ ಯಾವತ್ತೂ ಆಗಿರಲಿಲ್ಲ. ಚುನಾವಣೆ ಘೋಷಣೆಯಾದ ಮೇಲೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರನ್ನು ಜೈಲಿಗೆ ಹಾಕಿದ್ದಾರೆ ಎಂದು ಸುಧೀಂದ್ರ ಕುಲಕರ್ಣಿ ಬೇಸರ ವ್ಯಕ್ತಪಡಿಸಿದರು.

ಸಾಹಿತಿ ಪ್ರೊ.ರಾಜಪ್ಪ ದಳವಾಯಿ ಮಾತನಾಡಿ, ಪುಸ್ತಕವು 2013ರಿಂದ 2023ರವೆರೆಗಿನ ವಿಚಾರಗಳನ್ನು ಕುರಿತು ಮಾತನಾಡುತ್ತದೆ. ಜೊತೆಗೆ ಇತಿಹಾಸದ ಕುರಿತು ಹೇಳುತ್ತದೆ. ಮೋದಿ ವರ್ಸಸ್ ಮೋದಿ ಎಂಬುದು ಬಹಳ ಮುಖ್ಯವಾದ ಲೇಖನ ಇದರಲ್ಲಿದೆ. ಕೆಂಪು ಕೋಟೆಯಲ್ಲಿ ಮೋದಿ ಮಾಡಿರುವ ಭಾಷಣ ಹೇಗೆ ಬದಲಾಗುತ್ತಾ ಹೋಗಿದೆ ಎಂಬುದು ವಿಶ್ಲೇಷಣೆಯನ್ನು ಇಲ್ಲಿ ಮಾಡಲಾಗಿದೆ ಎಂದರು.

 ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಬಿ.ಆರ್. ಪಾಟೀಲ್, ಅನುವಾದಕ ರಾಹು ಸೇರಿದಂತೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here