Home ಕರ್ನಾಟಕ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿ ಕೋರಿ ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆದ ಸಿಎಂ...

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿ ಕೋರಿ ಮತ್ತೊಮ್ಮೆ ಪ್ರಧಾನಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

10
0

ಬೆಂಗಳೂರು, ಮೇ 23: ಲೈಂಗಿಕ ದೌರ್ಜನ್ಯ ಹಗರಣ ಪ್ರಕರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೊಂದು ಪತ್ರ ಬರೆದಿದ್ದಾರೆ.

‘ಪ್ರಜ್ವಲ್ ರೇವಣ್ಣ ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಹಗರಣ ಪ್ರಕರಣದ ಕುರಿತು ತಮ್ಮ ಗಮನ ಸೆಳೆಯಲು ಮತ್ತೊಮ್ಮೆ ಪತ್ರ ಬರೆಯುತ್ತಿದ್ದೇನೆ. ಈ ಪ್ರಕರಣವು ರಾಜ್ಯದ ಜನರ ಆತ್ಮಸಾಕ್ಷಿಯನ್ನು ಘಾಸಿಗೊಳಿಸಿರುವುದಷ್ಟೇ ಅಲ್ಲದೆ, ದೇಶಾದ್ಯಂತ ಕಳವಳಕ್ಕೆ ಕಾರಣವಾಗಿದೆ’ ಎಂದು ಮುಖ್ಯಮಂತ್ರಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಹಾಲಿ ಸಂಸದ, ಮರು ಆಯ್ಕೆ ಬಯಸಿ ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಾಗೂ ಮಾಜಿ ಪ್ರಧಾನಿಯೊಬ್ಬರ ಮೊಮ್ಮಗನಾಗಿರುವ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧ ಪ್ರಕರಣ ದಾಖಲಾಗುವ ಕೆಲವೇ ಗಂಟೆಗಳ ಮೊದಲು ಅಂದರೆ, 2024ರ ಎಪ್ರಿಲ್ 27ರಂದು ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ದೇಶ ತೊರೆದು ಜರ್ಮನಿಗೆ ಓಡಿಹೋಗಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

‘ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಹಾಗೂ ತ್ವರಿತ ಮತ್ತು ಸಂಘಟಿತ ಕ್ರಮಗಳನ್ನು ಕೈಗೊಂಡು ಪ್ರಜ್ವಲ್ ಅವರ ಪಾಸ್ ಪೋರ್ಟ್ ರದ್ದುಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ’ ಎಂದು ಪತ್ರದಲ್ಲಿ ಸಿಎಂ ಮನವಿ ಮಾಡಿದ್ದಾರೆ.

ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸುವ ಮೂಲಕ ಕರ್ನಾಟಕ ಸರಕಾರವು ತ್ವರಿತ ಕ್ರಮಗಳನ್ನು ಕೈಗೊಂಡಿದೆ. ಪ್ರಜ್ವಲ್ ರೇವಣ್ಣ ಮೇಲಿರುವ ಲೈಂಗಿಕ ಹಗರಣ ಆರೋಪಗಳ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದೆ. ಕ್ರಿಮಿನಲ್ ಆರೋಪಗಳನ್ನು ಎದುರಿಸಲು ಆರೋಪಿ ಉಪಸ್ಥಿತಿಗೆ ಎಸ್ ಐಟಿ ಪ್ರಯತ್ನಿಸುತ್ತಿದೆ. ಸಿಆರ್ ಪಿಸಿ ಕಲಂ 41ಎ ಅಡಿಯಲ್ಲಿ ತನಿಖಾಧಿಕಾರಿಯಿಂದ ಲುಕ್ಔಟ್ ಸುತ್ತೋಲೆ ಬ್ಲೂ ಕಾರ್ನರ್ ನೋಟಿಸ್ ಜಾರಿ ಆಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಎರಡು ಬಾರಿ ನೋಟಿಸ್ ಜಾರಿ ಮಾಡಿದ್ದರೂ ಆರೋಪಿ ಪ್ರಜ್ವಲ್ ರೇವಣ್ಣ ಇಂದಿಗೂ ತಲೆಮರೆಸಿಕೊಂಡಿದ್ದಾರೆ. ಇದು ತೀವ್ರ ಕಳವಳಕಾರಿ ಸಂಗತಿ. ಪ್ರಜ್ವಲ್ ರೇವಣ್ಣ ವಿರುದ್ಧದ ಎಫ್ ಐಆರ್ ನಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಮಹಿಳೆಯರ ವಸ್ತ್ರಾಪಹರಣ ಮತ್ತು ಬಲಿಪಶುಗಳಿಗೆ ಬೆದರಿಕೆ ಹಾಕುವ ಸಲುವಾಗಿ ಬಲವಂತವಾಗಿ ಲೈಂಗಿಕ ಕ್ರಿಯೆಗಳನ್ನು ವೀಡಿಯೊ-ಗ್ರಾಫಿಂಗ್ ಸ್ವರೂಪದ ಆರೋಪಗಳಿವೆ. ಸವಲತ್ತುಗಳ ದುರುಪಯೋಗ ಮತ್ತು ಉದ್ದೇಶಪೂರ್ವಕವಾಗಿ ಕಾನೂನು ಪ್ರಕ್ರಿಯೆಗಳಿಗೆ ಅಸಹಕಾರ ತೋರುತ್ತಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರದಿಂದ ಗಂಭೀರವಾದ ಕ್ರಮ ತೆಗೆದುಕೊಳ್ಳಬೇಕು.

ಆರೋಪಿಯ ಉಪಸ್ಥಿತಿಯನ್ನು ತನಿಖೆ ಮತ್ತು ವಿಚಾರಣೆಯನ್ನು ಎದುರಿಸಲು ರಾಜತಾಂತ್ರಿಕ ಪಾಸ್ಪೋರ್ಟ್ ರದ್ದುಗೊಳಿಸುವುದು ಸಾಧನವಾಗಿದೆ. ಇದನ್ನು ಒತ್ತಿ ಹೇಳುವ ಅಗತ್ಯವಿಲ್ಲ. ಇದೇ ರೀತಿಯ ಕಳವಳವನ್ನು ವ್ಯಕ್ತಪಡಿಸುವ ನನ್ನ ಹಿಂದಿನ ಪತ್ರವು ಸಹ ಪರಿಸ್ಥಿತಿಯ ಗಂಭೀರತೆಯನ್ನ ಪ್ರಸ್ತಾಪಿಸಿತ್ತು. ಆದರೆ, ನನಗೆ ತಿಳಿದಿರುವಂತೆ, ಕ್ರಮ ತೆಗೆದುಕೊಳ್ಳದಿರುವುದು ನಿರಾಶಾದಾಯಕವಾಗಿದೆ. ಆದ್ದರಿಂದ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಪಾಸ್ಪೋರ್ಟ್ ಕಾಯ್ದೆ, 1967ರ ಸೆಕ್ಷನ್ 10(3)(ಎಚ್) ಅಡಿಯಲ್ಲಿ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಿ ತ್ವರಿತ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡುತ್ತೇನೆ. ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಪ್ರಜ್ವಲ್ ದೇಶಕ್ಕೆ ಸುರಕ್ಷಿತವಾಗಿ ಮರಳುವಂತೆ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

 

LEAVE A REPLY

Please enter your comment!
Please enter your name here