ಬೆಂಗಳೂರು, ಎ.30: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವೀಡಿಯೊ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ(ಸಿಟ್) ತನಿಖೆ ಚುರುಕುಗೊಳಿಸಿದೆ. ಈ ನಡುವೆ ತನಿಖಾ ತಂಡಕ್ಕೆ ಸಿಐಡಿಯಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಒಟ್ಟು 18 ಮಂದಿಯನ್ನು ನೇಮಕ ಮಾಡಲಾಗಿದೆ.
ಪೊಲೀಸ್ ಮಹಾ ನಿರ್ದೇಶಕರ ಸೂಚನೆಯಂತೆ ಬೆಂಗಳೂರು ನಗರದ ಮಾರತ್ ಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಬೆಂಗಳೂರು ನಗರ ಸಿಸಿಬಿ ಎಸಿಪಿ ಸತ್ಯನಾರಾಯಣ ಸಿಂಗ್ ಎಸ್.ಬಿ., ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ಎನ್. ನಾಯ್ಕ್, ಮಂಗಳೂರು ಉರ್ವಾ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಭಾರತಿ ಜಿ., ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸುಮರಾಣಿ ಬಿ.ಎಸ್., ಆಲನಹಳ್ಳಿ ಠಾಣೆಯ ಪೊಲೀಸ್ ಇನ್ ಸ್ಪೆಕ್ಟರ್ ಸ್ವರ್ಣಾ ಜಿ.ಎಸ್., ವೈಟ್ ಫೀಲ್ಡ್ ನ ಸೆನ್ ಠಾಣೆ ಪೊಲೀಸ್ ಇನ್ ಸ್ಪೆಕ್ಟರ್ ಹೇಮಂತ್ ಕುಮಾರ್ ಎಂ., ಬೆಂಗಳೂರು ನಗರ ಸಿಸಿಬಿ ಪೊಲೀಸ್ ಇನ್ ಸ್ಪೆಕ್ಟರ್ ರಾಜಾ ಜಿ.ಸಿ., ಉಡುಪಿ ಮಲ್ಪೆ ಸಿಎಸ್ಪಿ ಪಿಎಸ್ಸೈ ವೈಲೆಟ್ ಫ್ಲೆಮೀನಾ ಸೇರಿದಂತೆ 18 ಮಂದಿಯನ್ನು ಓಓಡಿ ಆಧಾರದಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ನಿಯೋಜಿಸಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ತನಿಖೆ ಆರಂಭಿಸಿರುವ ಸಿಟ್ ಐವರು ಸಂತ್ರಸ್ತ ಮಹಿಳೆಯರನ್ನು ವಿಚಾರಣೆ ನಡೆಸಿ, ಹೇಳಿಕೆಗಳನ್ನು ಪಡೆದುಕೊಂಡಿದೆ.