ಪರಿಸರ ಪ್ರವಾಸೋದ್ಯಮ ವಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ವಿಸ್ತರಿಸುವ ಕುರಿತು ವರದಿ ಸಲ್ಲಿಸುವಂತೆ ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ಎಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಕಾರವಾರ: ಪರಿಸರ ಪ್ರವಾಸೋದ್ಯಮ ವಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ವಿಸ್ತರಿಸುವ ಕುರಿತು ವರದಿ ಸಲ್ಲಿಸುವಂತೆ ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಪಿಸಿಸಿಎಫ್) ಎಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಬೆಳಗಾವಿ ಮೂಲದ ವನ್ಯಜೀವಿ ಕಾರ್ಯಕರ್ತ ಗಿರಿಧರ್ ಕುಲಕರ್ಣಿ ಅವರ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಆದೇಶ ನೀಡಲಾಗಿದೆ.
ಜನವರಿ 5, ಮಾರ್ಚ್ 25 ಮತ್ತು ಮೇ 25 ರಂದು ಸ್ವೀಕರಿಸಲಾದ ಕುಲಕರ್ಣಿ ಅವರ ಪತ್ರಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ವರದಿ ನೀಡುವಂತೆ ಬಳ್ಳಾರಿ, ಚಾಮರಾಜನಗರ, ಬೆಳಗಾವಿ, ಬೆಂಗಳೂರು ಮತ್ತು ಧಾರವಾಡದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಮೈಸೂರು, ಕೊಡಗು, ಚಿಕ್ಕಮಗಳೂರು, ಕೆನರಾ, ಹಾಸನ ಮತ್ತು ಕಲಬುರಗಿ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪಿಸಿಸಿಎಫ್ ಸೂಚಿಸಿದ್ದಾರೆ.
ಇದನ್ನು ಓದಿ: ಅಕ್ರಮವಾಗಿ ಮರಗಳನ್ನು ಕಡಿದ ಆರೋಪ: ವಿರಾಜಪೇಟೆ ವಿಭಾಗದ ಡಿಸಿಎಫ್ ಆಗಿದ್ದ ಚಕ್ರಪಾಣಿ ಅಮಾನತು
ಕುಲಕರ್ಣಿ ಅವರು ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶದ ತೆಕ್ಕಡಿಯಲ್ಲಿ ನಡೆದ ದೋಣಿ ಅಪಘಾತವನ್ನು ಉಲ್ಲೇಖಿಸಿ ಪತ್ರ ಬರೆದಿದ್ದು, ಕರ್ನಾಟಕ ಪ್ರವಾಸೋದ್ಯಮ ನೀತಿ 2020-26 ಪ್ರವಾಸಿಗರಿಗೆ ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ಅನುಭವವನ್ನು ಒದಗಿಸುವ ಗುರಿ ಹೊಂದಿರುವುದರಿಂದ ಅಂತಹ ಒಪ್ಪಂದವು ಜಾರಿಯಲ್ಲಿರಬೇಕು ಎಂದು ಹೇಳಿದ್ದಾರೆ.
‘ಅರಣ್ಯ ಇಲಾಖೆಯು ವಿಮಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು’
ಪ್ರವಾಸಿಗರಿಗೆ ವಿಮೆ ವಿಸ್ತರಿಸುವ ಸಂಬಂಧ ಅರಣ್ಯ ಇಲಾಖೆಯು ವಿಮಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು ಎಂದಿರುವ ಕುಲಕರ್ಣಿ ಅವರು, ತಮ್ಮ ಪತ್ರದಲ್ಲಿ ಟ್ರೆಕ್ಕಿಂಗ್, ಕಯಾಕಿಂಗ್, ಜೆಟ್ ಸ್ಕೀ, ಬರ್ಡಿಂಗ್, ಡಾಲ್ಫಿನ್ ರೈಡ್, ಸಫಾರಿ, ಜಿಪ್-ಲೈನ್, ಬೋಟ್ ರೈಡ್ ಮತ್ತು ಕರ್ನಾಟಕ ಅರಣ್ಯ ಇಲಾಖೆ ಅಥವಾ ಜಂಗಲ್ ಲಾಡ್ಜ್‌ಗಳು ನಡೆಸುವ ಪರಿಸರ ಪ್ರವಾಸೋದ್ಯಮ ವಲಯಗಳಲ್ಲಿನ ಆನೆ ಶಿಬಿರಗಳನ್ನು ಉಲ್ಲೇಖಿಸಿದ್ದಾರೆ.
ಕೇರಳ ಅರಣ್ಯ ಇಲಾಖೆಯು ಸಹ ಆ ರಾಜ್ಯದಲ್ಲಿ ಪರಿಸರ ಪ್ರವಾಸೋದ್ಯಮ ವಲಯಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಮೆ ನೀಡುತ್ತಿದೆ ಎಂದು ಕುಲಕರ್ಣಿ ಅವರು ಹೇಳಿದ್ದಾರೆ.