ಬೀದರ್:
ರಾಜ್ಯದಲ್ಲಿ ಕಳೆದ ಮೂರು ತಿಂಗಳುಗಳಿಂದ ಸುರಿದ ಮಳೆ ಮತ್ತು ಪ್ರವಾಹದಿಂದಾಗಿ ರೈತರು ಬೆಳೆ-ಮನೆ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ತಕ್ಷಣ ವಿಧಾನಮಂಡಲದ ವಿಶೇಷ ಅಧಿವೇಶನ ಕರೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಬೀದರ್ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಬಸವಕಲ್ಯಾಣದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದೆಡೆ ಕೊರೊನಾ, ಇನ್ನೊಂದೆಡೆ ಪ್ರವಾಹ, ಮತ್ತೊಂದೆಡೆ ಹಾಳಾಗಿ ಹೋಗಿರುವ ಶಾಂತಿ ಮತ್ತು ಸುವ್ಯವಸ್ಥೆ ಇವೆಲ್ಲದರ ನಡುವೆ ಭ್ರಷ್ಟಾಚಾರದ ಹಗರಣಗಳು. ಇವೆಲ್ಲದರ ಬಗ್ಗೆ ಶಾಸಕರು ಚರ್ಚೆ ನಡೆಸಲು ವಿಧಾನಮಂಡಲವೇ ಸೂಕ್ತ ವೇದಿಕೆ. ವಿರೋಧಪಕ್ಷಗಳನ್ನು ಎದುರಿಸುವ ಧೈರ್ಯ ಇಲ್ಲದ ರಾಜ್ಯ ಸರ್ಕಾರ ಅಧಿವೇಶನವನ್ನೇ ನಡೆಸದೆ ತಪ್ಪಿಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಇಲ್ಲಿಯ ವರೆಗೆ ರಾಜ್ಯ ಸರ್ಕಾರ ಪ್ರವಾಹದಿಂದಾಗಿರುವ ನಷ್ಟದ ಸಮೀಕ್ಷೆಯನ್ನೇ ಮಾಡಿಲ್ಲ. ಮುಖ್ಯಮಂತ್ರಿಗಳು ವಿಮಾನದಲ್ಲಿ ನೋಡಿ ಹೋದರು, ಕಂದಾಯ ಸಚಿವರು ಕಾಟಾಚಾರಕ್ಕೆ ಭೇಟಿ ನೀಡಿದರು, ಜಿಲ್ಲಾ ಸಚಿವರಾಗಲಿ, ಅಧಿಕಾರಿಗಳು ಜನರ ಬಳಿ ಹೋಗಿಯೇ ಇಲ್ಲ. ಇಡೀ ಸರ್ಕಾರವೇ ನೆರೆಯಲ್ಲಿ ಕೊಚ್ಚಿಕೊಂಡ ಹೋಗಿರುವಂತಹ ದುಸ್ಥಿತಿ ಇದೆ ಎಂದು ಹರಿಹಾಯ್ದರು.