ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕುಟುಂಬದಲ್ಲಿ ನಿಜವಾದ ದಲಿತತ್ವ ಇದೆಯೇ? ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭಾನುವಾರ ಪ್ರಶ್ನಿಸಿದರು.
ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಕೊಟ್ಟ ಕುದುರೆಯನ್ನು ಏರದವ ವೀರನೂ ಇಲ್ಲ. ಶೂರನೂ ಅಲ್ಲ. ಪ್ರಿಯಾಂಕ್ ಖರ್ಗೆ ಅವರದ್ದು ಕೇವಲ ಅಪ್ಪನ ನೆರಳಿನಲ್ಲಿ ಅಧಿಕಾರ ಅನುಭವಿಸುವ ಪಿತ್ರಾರ್ಜಿತ ರಾಜಕಾರಣ ಎಂದರು.
ಆದರೆ ನನ್ನದು ಸ್ವಂತ ಬಲದಿಂದ ಬೆಳೆದುಬಂದ ಸ್ವಯಾರ್ಜಿತ ರಾಜಕಾರಣ. ದಲಿತರ ಬಗ್ಗೆ ಮಾತನಾಡುವ ಇವರ ಕುಟುಂಬದಲ್ಲಿ ನಿಜವಾದ ದಲಿತತ್ವ ಇದೆಯೇ? ಸಣ್ಣ ಹಳ್ಳಿಯಿಂದ ಬಂದ ನಾನು ಇಂದು ಬಿಜೆಪಿಯಲ್ಲಿ ಈ ಮಟ್ಟಕ್ಕೆ ಬೆಳೆದಿರುವುದನ್ನು ಕಂಡು ಅವರಿಗೆ ಹೊಟ್ಟೆಯುರಿ ಶುರುವಾಗಿದೆ ಎಂದು ವಾಗ್ದಾಳಿ ನಡೆಸಿದರು.
“ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ!”
ಪ್ರಿಯಾಂಕ್ ಖರ್ಗೆ ಅವರದ್ದು ಕೇವಲ ಅಪ್ಪನ ನೆರಳಿನಲ್ಲಿ ಅಧಿಕಾರ ಅನುಭವಿಸುವ ‘ಪಿತ್ರಾರ್ಜಿತ ರಾಜಕಾರಣ’, ಆದರೆ ನನ್ನದು ಸ್ವಂತ ಬಲದಿಂದ ಬೆಳೆದುಬಂದ ‘ಸ್ವಯಾರ್ಜಿತ ರಾಜಕಾರಣ’. ದಲಿತರ ಬಗ್ಗೆ ಮಾತನಾಡುವ ಇವರ ಕುಟುಂಬದಲ್ಲಿ ನಿಜವಾದ ದಲಿತತ್ವ ಇದೆಯೇ? ಸಣ್ಣ ಹಳ್ಳಿಯಿಂದ ಬಂದ ನಾನು,… pic.twitter.com/qQ9XtJABjt
— Chalavadi Narayanaswamy (@NswamyChalavadi) February 22, 2026
ದಲಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ 39,000 ಕೋಟಿ ರೂ.ಗಳನ್ನು ಕಾಂಗ್ರೆಸ್ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ. ಆದರೂ ಕಾಂಗ್ರೆಸ್ನ ದಲಿತ ನಾಯಕರು ತುಟಿ ಬಿಚ್ಚುತ್ತಿಲ್ಲ! ಒಳಮೀಸಲಾತಿ ಜಾರಿಯಲ್ಲಿನ ನ್ಯೂನತೆಗಳಿಂದ ನಮ್ಮ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಈ ಸರ್ಕಾರ ವಿಫಲವಾಗಿದೆ. ವಿಶ್ವವಿದ್ಯಾಲಯ, ಸಾರಿಗೆ ಇಲಾಖೆ, ಬಿಡಿಎ ಸೇರಿದಂತೆ ಎಲ್ಲೆಡೆ ನಮ್ಮ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.
ನನ್ನ ಹೋರಾಟ ಸ್ವತಂತ್ರವಾದದ್ದು, ನನ್ನ ರಾಜೀನಾಮೆ ಕೇಳುವವರು ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಅವರ ಇತಿಹಾಸ ಮತ್ತು ಸತ್ಯಾಂಶಗಳನ್ನು ಸರಿಯಾಗಿ ಓದಿ, ಅರ್ಥಮಾಡಿಕೊಳ್ಳುವ ಯೋಗ್ಯತೆ ಬೆಳೆಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
