ಉಡುಪಿ, ಜ.24: ಉಡುಪಿ ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಸಹಯೋಗದೊಂದಿಗೆ ಜ.26ರಿಂದ ಮೂರು ದಿನಗಳ ಕಾಲ ದೊಡ್ಡಣಗುಡ್ಡೆ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿರುವ ಫಲಪುಷ್ಪ ಪ್ರದರ್ಶನದಲ್ಲಿ 6000 ಸಂಖ್ಯೆಯ ಸುಮಾರು 35 ಜಾತಿಯ ಹೂವಿನ ಗಿಡಗಳನ್ನು ಜೋಡಿಸಿ ಇಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಕೇಂದ್ರದಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಶಿವಮೊಗ್ಗದಿಂದ ತರಿಸಲಾದ ಪೆಟೂನಿಯ, ವರ್ಬೇನ, ಸ್ಯಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಚೈನಾ, ಅಸ್ಟರ್, ಬಾಲ್ಸಮ್, ಟೋರಿನೊ, ವಿಂಕಾ ರೋಸಿಯಾ, ಡೇಲಿಯಾ ಇತ್ಯಾದಿಗಳನ್ನು ಪಾತಿಯಲ್ಲಿ ಹಾಗೂ ಕುಂಡಗಳಲ್ಲಿ ನಾಟಿ ಮಾಡಿ ಪ್ರದರ್ಶಿಸಲಾಗುವುದು ಎಂದರು.
ಅಯೋಧ್ಯೆ ರಾಮಮಂದಿರದ ಕಲಾಕೃತಿಯನ್ನು ಅಂದಾಜು 15 ಅಡಿ ಎತ್ತರದಲ್ಲಿ 20-22 ಅಡಿ ಉದ್ದ 2-ಡಿ ಮಾದರಿಯಲ್ಲಿ ವಿವಿಧ ಧಾನ್ಯ ಹಾಗೂ ಹೂವುಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಅದೇ ರೀತಿ ಕ್ಯಾಪ್ಸಿಕಂ ಫೋಟೋ ಫ್ರೇಮ್, ಫ್ಲವರ್ ಕೈಟ್, ಸೆಲ್ಫಿ ರೆನ್, ಸೈಕಲ್ ರ್ಯಾಬಿಟ್, ಪಿಕಾಕ್ ಮೊಡೆಲ್‌ಗಳನ್ನು ಹೂವು ಮತ್ತು ಎಲೆಗಳಿಂದ ತಯಾರಿಸಲಾಗುವುದು. ಅದೇ ರೀತಿ ವಿವಿಧ ಗಣ್ಯರ ಕಲಾಕೃತಿಯನ್ನು ತರಕಾರಿ, ಹಣ್ಣುಗಳಲ್ಲಿ ಕೆತ್ತನೆ ಮಾಡ ಲಾಗುವುದು ಎಂದು ಅವರು ಮಾಹಿತಿ ನೀಡಿದರು.
ವಿವಿಧ ಅಲಂಕಾರಿಕ ಗಿಡಗಳ ಪ್ರದರ್ಶನ, ಇಕೆಬಾನೆ ಇತ್ಯಾದಿ ಹೂವಿನ ಜೋಡಣೆ, ಹೂವಿನ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಕೃಷಿ ಸಂಬಂಧಿತ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಮೀನುಗಾರಿಕೆ, ಜಿಪಂ, ಪಶು ಸಂಗೋಪನೆ, ಕೈಗಾರಿಕೆ, ವಾಣಿಜ್ಯ ಇಲಾಖೆ ಹಾಗೂ ಇತರೆ ಇಲಾಖೆಗಳಿಂದ ವಸ್ತು ಪ್ರದರ್ಶನ ಮಳಿಗೆಗಳು ಇರುತ್ತವೆ. ನರ್ಸರಿ ಗಿಡಗಳ ಮಾರಾಟ ಮಳಿಗೆ, ಕೃಷಿ ಪರಿಕರಗಳ ಪ್ರದರ್ಶನ ಹಾಗೂ ಯಂತ್ರೋಪಕರಣಗಳ ಮಾರಾಟ ಮಳಿಗೆ ಗಳನ್ನು ತೆರೆಯಲಾಗುತ್ತದೆ.
ರೈತರು ಬೆಳೆದಿರುವ ವಿಶಿಷ್ಟ ಹಣ್ಣುಗಳು, ತರಕಾರಿ, ತೋಟದ ಬೆಳೆಗಳು, ಸಂಬಾರು ಬೆಳೆಗಳ ಇಲ್ಲಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತದೆ. ಅದೇ ರೀತಿ ರೈತರಿಗೆ ಇಲಾಖೆಯಿಂದ ವಿವಿಧ ತಾಂತ್ರಿಕತೆಗಳ ಬಗ್ಗೆ ವಿಚಾರ ಸಂಕಿರಣ ಗಳನ್ನು ಏರ್ಪಡಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಯಾಲ್, ತೋಟಗಾರಿಕೆ ಇಲಾಖೆಯ ಪ್ರಭಾರ ಉಪನಿರ್ದೇಶಕ ಪ್ರಮೋದ್ ಸಿ.ಎಂ. ಉಪಸ್ಥಿತರಿದ್ದರು.