Home ಕರ್ನಾಟಕ ಫೀಲ್ಡಿಂಗ್‌ಗೆ ಅಡ್ಡಿ | ರವೀಂದ್ರ ಜಡೇಜ ಔಟ್

ಫೀಲ್ಡಿಂಗ್‌ಗೆ ಅಡ್ಡಿ | ರವೀಂದ್ರ ಜಡೇಜ ಔಟ್

27
0

ಚೆನ್ನೈ : ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವೆ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನಾಟಕೀಯ ಸನ್ನಿವೇಶ ಕಂಡುಬಂದಿದ್ದು ಕ್ಷೇತ್ರರಕ್ಷಣೆಗೆ ಅಡ್ಡಿಪಡಿಸಿದ ಕಾರಣಕ್ಕೆ ಸಿಎಸ್‌ಕೆ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜ ಔಟ್ ಆದರು. ಐಪಿಎಲ್ ಇತಿಹಾಸದಲ್ಲಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಔಟಾದ ಮೂರನೇ ಕ್ರಿಕೆಟಿಗ ಎನಿಸಿಕೊಂಡರು.

ಈ ಹಿಂದೆ ಯೂಸುಫ್ ಪಠಾಣ್(2013ರಲ್ಲಿ ಪುಣೆ ವಿರುದ್ಧ) ಹಾಗೂ ಅಮಿತ್ ಮಿಶ್ರಾ (2019ರಲ್ಲಿ ಹೈದರಾಬಾದ್ ವಿರುದ್ಧ) ಕೂಡ ಫೀಲ್ಡಿಂಗ್‌ಗೆ ತೊಡಕಾದ ಕಾರಣಕ್ಕೆ ವಿಕೆಟ್ ಒಪ್ಪಿಸಿದ್ದರು.

ಪಂದ್ಯದ ನಿರ್ಣಾಯಕ 16ನೇ ಓವರ್‌ನಲ್ಲಿ ಜಡೇಜ ಅವರು ರಾಜಸ್ಥಾನದ ವೇಗದ ಬೌಲರ್ ಅವೇಶ್ ಖಾನ್ ಬೌಲಿಂಗ್‌ನಲ್ಲಿ ಒಂದು ರನ್ ಗಳಿಸಿದರು. ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್ ರನ್ ಗಳಿಸಲು ಹಿಂದೇಟು ಹಾಕಿದರೂ ಜಡೇಜ ಎರಡನೇ ರನ್ ಗಳಿಸಲು ಪ್ರಯತ್ನಿಸಿದರು. ಜಡೇಜ ಪಿಚ್ ಮಧ್ಯದ ತನಕ ಓಡಿದರು. ಜಡೇಜರನ್ನು ಔಟ್ ಮಾಡಲು ರಾಜಸ್ಥಾನದ ನಾಯಕ ಹಾಗೂ ವಿಕೆಟ್‌ಕೀಪರ್ ಸಂಜು ಸ್ಯಾಮ್ಸನ್ ನಾನ್‌ಸ್ಟ್ರೈಕರ್ ತುದಿಯತ್ತ ಚೆಂಡನ್ನು ಥ್ರೋ ಮಾಡಿದರು ಆದರೆ ಚೆಂಡು ಜಡೇಜರ ಬೆನ್ನಿಗೆ ಬಡಿದು ಗುರಿ ತಪ್ಪಿತು. ಇದರಿಂದ ಕೋಪಗೊಂಡ ಸ್ಯಾಮ್ಸನ್ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಜಡೇಜ ವಿರುದ್ಧ ಕ್ರಮಕ್ಕೆ ಮನವಿ ಮಾಡಿದರು. ಘಟನೆಯನ್ನು ಪರಿಶೀಲಿಸುವಂತೆ ಅಂಪೈರ್‌ಗಳನ್ನು ಕೇಳಿಕೊಂಡರು.

3ನೇ ಅಂಪೈರ್ ಪರಿಶೀಲಿಸಿದ ನಂತರ ಜಡೇಜ ಅವರು ರನೌಟ್ ಆಗುವುದನ್ನು ತಪ್ಪಿಸಲು ತಮ್ಮ ಓಟದ ಹಾದಿಯನ್ನು ಬದಲಾಯಿಸಿದ್ದಾರೆ. ಹೀಗಾಗಿ ಉದ್ದೇಶಪೂರ್ವಕವಾಗಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಾರೆ ಎಂದು ಸ್ಪಷ್ಟವಾಗಿದೆ.

ದೊಡ್ಡ ಪರದೆಯಲ್ಲಿ ಜಡೇಜ ಔಟ್ ಎಂದು ಪ್ರದರ್ಶಿಸಲಾಯಿತು. ಜಡೇಜ ಭಾರೀ ನಿರಾಸೆಯೊಂದಿಗೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

LEAVE A REPLY

Please enter your comment!
Please enter your name here