ಬಂಟ್ವಾಳ : ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೋರ್ವಳಿಗೆ ಕಾರು ಢಿಕ್ಕಿಯಾದ ಘಟನೆ ಬಿಸಿರೋಡ್ ಸಮೀಪದ ಪಚ್ಚಿನಡ್ಕ ಎಂಬಲ್ಲಿ ಗುರುವಾರ ನಡೆದಿದೆ.
ಗಾಯಗೊಂಡ ಯುವತಿಯನ್ನು ಸ್ಥಳೀಯ ನಿವಾಸಿ ಚೈತ್ರ (22 ) ಎಂದು ಹೆಸರಿಸಲಾಗಿದೆ. ಚೈತ್ರಳಿಗೆ ನಿಶ್ಚಿತಾರ್ಥ ನಡೆದು ಮದುವೆಗೆ ದಿನ ನಿಗದಿಯಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿರುವ ಚೈತ್ರ ಸಂಜೆ ಕೆಲಸ ಬಿಟ್ಟು ಬಸ್ ನಿಂದ ಇಳಿದು ತಾಯಿ ಜೊತೆಗೆ ಮನೆಯ ಕಡೆಯ ತೆರಳುತ್ತಿದ್ದ ವೇಳೆ ಅಪಘಾತ ನಡೆದಿದೆ.
ತಾಯಿ ಜೊತೆ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದ ಕಾರು ಢಿಕ್ಕಿಯಾಗಿದೆ. ಇದೇ ಸಂದರ್ಭ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಟ್ರಾಫಿಕ್ ಪೊಲೀಸರು ಅವರ ವಾಹನ ಮೂಲಕ ಗಾಯಾಳುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.